ದೇಶ

ಸುಂಜವಾನ್ ಸೇನಾ ಕ್ಯಾಂಪ್ ಮೇಲೆ ಉಗ್ರರ ದಾಳಿ: 2 ಯೋಧರು ಹುತಾತ್ಮ, 3 ಉಗ್ರರ ಹತ್ಯೆ

Manjula VN
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಹೊರವಲಯದ ಸುಂಜ್ವಾನ್ ಸೇನಾ ಶಿಬಿರದ ಮೇಲೆ ಶನಿವಾರ ನಸುಕಿನ ವೇಳೆ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿ, ಮೂವರು ಉಗ್ರರನ್ನು ಸದೆಬಡಿಯಲಾಗಿದೆ. 
ಉಗ್ರರು ನಡೆಸಿದ ದಾಳಿಯಲ್ಲಿ ಓರ್ವ ಕರ್ನಲ್ ರ್ಯಾಂಕ್ ಅಧಿಕಾರಿ, ಅವರ ಪುತ್ರಿ ಸೇರಿದಂದೆ 9 ಮಂದಿ ಗಾಯಗೊಂಡಿದ್ದಾರೆ. 
ಉಗ್ರ ಅಫ್ಜಲ್ ಗುರು ಮರಣ ದಂಡನೆಗೆ ಗುರಿಯಾದ ಫೆ.9 ರಂದು ಉಗ್ರರ ದಾಳಿ ನಡೆಯಬಹುದೆಂದು ಗುಪ್ತಚರ ಮೂಲಗಳು ಮುನ್ಸೂಚನೆ ನೀಡಿದ್ದವು. ಈ ನಡುವೆ ದಾಳಿ ನಡೆಸಿದ ಬಳಿಕ ಪರಾರಿಯಾಗಿದ್ದ ಉಗ್ರರನ್ನು ಸುತ್ತುವರೆಯುವಲ್ಲಿ ಸೇನೆ ಯಶಸ್ವಿಯಾಗಿದ್ದು, ಕಾರ್ಯಾಚರಣೆ ಬಳಿ ಮೂವರು ಉಗ್ರರನ್ನು ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ. ಮನೆಯಲ್ಲಿ ಇನ್ನೂ ಕೆಲ ಉಗ್ರರು ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾಗತೊಡಗಿವೆ.
ನಿನ್ನೆ ಬೆಳಿಗ್ಗೆ 5 ಗಂಟೆ ಸುಮಾರಿಗೆ ಸುಂಜ್ವಾನ್ ಕ್ಯಾಂಪ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಉಗ್ರರು ಹಾರಿಸಿದ ಗುಂಡಿಗೆ ಸುಬೇದಾರ್ ಮದನ್ ಲಾಲ್ ಚೌಧರಿ ಮತ್ತು ಸುಬೇದಾರ್ ಮೊಹಮ್ಮದ್ ಅಶ್ರಫ್ ಮೀರ್ ಹುತಾತ್ಮರಾಗಿದ್ದಾರೆ. ಈ ವೇಳೆ ಇತರೆ 9 ಮಂದಿ ಗಾಯಗೊಂಡಿದ್ದು, ಅವರನ್ನು ಉಧಂಪುರ ಆಸ್ಪತ್ರೆಗೆ ಹೆಲಿಕಾಪ್ಟರ್ ಮೂಲಕ ಕರೆದೊಯ್ಯಲಾಗಿದೆ. ಗಾಯಗೊಂಡ 9 ಮಂದಿಯಲ್ಲಿ ಐವರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ. 
ಶಾಲೆಗೆ ರಜೆಯಿದ್ದ ಕಾರಣ ಕರ್ನಲ್ ರ್ಯಾಂಕ್ ಅಧಿಕಾರಿ ಪುತ್ರಿ ತನ್ನ ತಂದೆಯನ್ನು ಭೇಟಿಯಾಗುವ ಸಲುವಾಗಿ ಸೇನಾ ಕ್ಯಾಂಪ್'ಗೆ ಬಂದಿದ್ದಳು. ಉಗ್ರರ ದಾಳಿಯಿಂದಾಗಿ ಕರ್ನಲ್ ಪುತ್ರಿ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. 
ಉಗ್ರರು ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರೆಂದು ಕಾರ್ಯಾಚರಣೆ ವೇಳೆ ಖಚಿತಗೊಂಡಿತ್ತು. ಪ್ರಸ್ತುತ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಈಗಾಗಲೇ 150 ಮನೆಗಳಲ್ಲಿ ತಪಾಸಣೆ ನಡೆಸಲಾಗಿದೆ. ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಲಾಗಿದೆ. ಎಲ್ಲಾ ಉಗ್ರರನ್ನು ಸದೆಬಡಿಯುವವರೆಗೂ ಹಾಗೂ ಬಂಧನಕ್ಕೊಳಪಡಿಸುವವರೆಗೂ ಕಾರ್ಯಾಚಱಣೆ ಮುಂದುವರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
SCROLL FOR NEXT