ಚೆನ್ನೈ: ಕಾವೇರಿ ತೀರ್ಪಿನಲ್ಲಿ ತಮಿಳುನಾಡಿಗೆ ಹಂಚಿಕೆಯಾಗಿದ್ದ ನೀರಿನ ಪ್ರಮಾಣ ಕಡಿತವಾಗಿರುವುದು ನಿರಾಶೆ ತಂದಿದೆ ಎಂದು ತಮಿಳುನಾಡು ಸಿಎಂ ಇ ಪಳನಿ ಸ್ವಾಮಿ ಹೇಳಿದ್ದಾರೆ.
ನಿನ್ನೆ ಪ್ರಕಟವಾದ ಕಾವೇರಿ ನೀರು ಹಂಚಿಕೆ ವಿವಾದದ ಅಂತಿಮ ತೀರ್ಪಿನಲ್ಲಿ ಕರ್ನಾಟಕಕ್ಕೆ ಹೆಚ್ಚುವರಿಯಾಗಿ 14.75 ಟಿಎಂಸಿ ನೀರು ಹಂಚಿಕೆ ಮಾಡಲಾಗಿದ್ದು, ತಮಿುನಾಡಿನ ನೀರಿನ ಪ್ರಮಾಣವನ್ನು 177.5 ಟಿಎಂಸಿಗೆ ಇಳಿಕೆ ಮಾಡಲಾಗಿತ್ತು. ತೀರ್ಪಿನ ಕುರಿತಂತೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಸಿಎಂ ಇ ಪಳನಿ ಸ್ವಾಮಿ, ನೀರು ಹಂಚಿಕೆ ಪ್ರಮಾಣ ಕಡಿತವಾಗಿರುವುದು ನಿರಾಶೆ ತಂದಿರುವುದು ನಿಜ. ಆದರೆ ತಮಿಳುನಾಡು ಪಾಲಿಗೆ ಆಶಾದಾಯಕವಾದ ಒಂದಷ್ಟು ಅಂಶಗಳು ತೀರ್ಪಿನಲ್ಲಿವೆ ಎಂದು ಹೇಳಿದ್ದಾರೆ.
ಕಾವೇರಿ ನದಿ ನೀರು ವಿವಾದವನ್ನು ತಮಿಳುನಾಡು ಸರ್ಕಾರ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿಲ್ಲ ಎಂಬ ಡಿಎಂಕೆ ಆರೋಪಕ್ಕೆ ಉತ್ತರಿಸಿರುವದ ಪಳನಿಸ್ವಾಮಿ ಅವರು, ಪ್ರಮುಖವಾಗಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಕುರಿತು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖ ಮಾಡಿದ್ದು, ಇದರಿಂದ ತಮಿಳುನಾಡು ವಾದಕ್ಕೆ ಜಯ ಸಿಕ್ಕಂತಾಗಿದೆ ಎಂದು ಹೇಳಿದ್ದಾರೆ. ಮುಂದಿನ 6 ವಾರಗಳಲ್ಲಿ ಯಾವುದೇ ರೀತಿಯ ಕಾಲಾವಕಾಶ ಕೇಳದೇ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಆದೇಶ ನೀಡಿದೆ. ಇದನ್ನು ನಿಜಕ್ಕೂ ತಮಿಳುನಾಡು ಪಾಲಿಗೆ ಆಶಾದಾಯಕವಾದ ತೀರ್ಪು ಎಂದು ಪಳನಿ ಸ್ವಾಮಿ ಅಭಿಪ್ರಾಯಪಟ್ಟರು.
ಇದೇ ವೇಳೆ ಡಿಎಂಕೆ ವಿರುದ್ಧ ಕಿಡಿಕಾರಿದ ಅವರು, ಕಾವೇರಿ ತೀರ್ಪಿನಲ್ಲೂ ರಾಜಕೀಯ ಮಾಡುವ ಮೂಲಕ ಡಿಎಂಕೆ ಕ್ಷುಲ್ಲಕ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದರು.