ಕಾನ್ಪುರ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ನೀರವ್ ಮೋದಿ ಮತ್ತು ಅವರ ಕುಟುಂಬ ಸದಸ್ಯರು ಮಾಡಿರುವ ಬಹುಕೋಟಿ ವಂಚನೆ ಪ್ರಕರಣ ಇನ್ನೂ ತನಿಖಾ ಹಂತದಲ್ಲಿರುವಾಗಲೇ ಅಂತಹುದೇ ಮತೊಂದು ವಂಚನೆ ಪ್ರಕರಣ ಬಯಲಿಗೆ ಬಂದಿದೆ.
ಪ್ರಖ್ಯಾತ ‘ರೋಟೋಮ್ಯಾಕ್’ ಪೆನ್ ಕಂಪನಿಯ ಮಾಲೀಕರು ವಿವಿಧ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಂದ ಸುಮಾರು 800 ಕೋಟಿ ರೂಪಾಯಿ ಸಾಲ ಮಾಡಿದ್ದು, ಸಾಲ ನೀಡದ ಸಂಬಂಧ ಬ್ಯಾಂಕ್ ಅಧಿಕಾರಿಗಳು ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ರೋಟೋಮ್ಯಾಕ್ ಕಂಪನಿಯ ಮಾಲೀಕ ವಿಕ್ರಮ್ ಕೊಠಾರಿ ಒಟ್ಟು ಐದು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಂದ ಸುಮಾರು 800 ಕೋಟಿ ರುಪಾಯಿಗೂ ಹೆಚ್ಚು ಸಾಲ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗಳಿಂದ ಕೊಠಾರಿ 800 ರೂ.ಸಾಲ ಪಡೆದಿದ್ದಾರಂತೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಕೊಠಾರಿ 485 ಕೋಟಿ ರೂ ಸಾಲಪಡೆದಿದ್ದು, ಅಲಹಾಬಾದ್ ಬ್ಯಾಂಕ್ ನಿಂದ 352 ಕೋಟಿ ರೂ. ಮತ್ತು ಉಳಿದ 3 ಬ್ಯಾಂಕ್ ಗಳಿಂದಲೂ ಸಾಲ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಕಾನ್ಪುರ ಸಿಟಿ ಸೆಂಟರ್ ನಲ್ಲಿ ಕೊಠಾರಿ ಅವರ ಕಚೇರಿ ಇದ್ದು, ಆದರೆ ಕಳೆದ ಒಂದು ವಾರದಿಂದ ಕಚೇರಿಗೆ ಬೀಗ ಹಾಕಲಾಗಿದೆ. ಕೊಠಾರಿ ಎಲ್ಲಿದ್ದಾರೆ ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಅಲಹಾಬಾದ್ ಬ್ಯಾಂಕ್ ಮ್ಯಾನೇಜರ್ ರಾಜೇಶ್ ಗುಪ್ತಾ, ‘ಕೊಠಾರಿ ಅವರು ಸಾಲ ಕಟ್ಟದೇ ಹೋದರೆ ಆಸ್ತಿಗಳನ್ನು ಜಪ್ತಿ ಮಾಡಿ ಸಾಲ ವಸೂಲಿ ಮಾಡಲಾಗುವುದು’ ಎಂದು ಹೇಳಿದ್ದಾರೆ.
ಒಟ್ಟಾರೆ ವಿಜಯ್ ಮಲ್ಯಾ, ನೀರವ್ ಮೋದಿ ಪ್ರಕರಣಗಳೇ ಇನ್ನೂ ಇತ್ಯರ್ಥವಾಗದೇ ಅಧಿಕಾರಿಗಳು ತಲೆಕೆಡಿಸಿಕೊಂಡು ಕುಳಿತಿದ್ದರೇ ಇದೀಗ ರೋಟೋಮ್ಯಾಕ್ ಸಂಸ್ಥೆಯ ಮಾಲೀಕರೂ ಕೂಡ ಇದೇ ಹಾದಿ ಹಿಡಿದಿರುವುದು ಅಚ್ಚರಿ ತಂದಿದೆ.