ಆ್ಯಸಿಡ್ ದಾಳಿ ನಡೆಸಿದ ಪ್ರಮುಖ ಆರೋಪಿ ಸೋನು ಪೋಲೀಸರ ವಶದಲ್ಲಿ(ಹಿಂದುಸ್ಥಾನ್ ಟೈಮ್ಸ್ ಚಿತ್ರ)
ಮೀರತ್(ಉತ್ತರ ಪ್ರದೇಶ): ಓರ್ವ ಮಹಿಳಾ ಕುಸ್ತಿ ಪಟು ಹಾಗೂ ಇನ್ನೋರ್ವ ಮಹಿಳಾ ಬಾಕ್ಸರ್ ಮೇಲೆ ದುಷ್ಕರ್ಮಿಗಳು ಆ್ಯಸಿಡ್ ಎರಚಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.
ಮೂವರು ದುಷ್ಕರ್ಮಿಗಳು ಈ ಕೃತ್ಯ ನಡೆಸಿದರೆನ್ನಲಾಗಿದ್ದು ಪ್ರಧಾನ ಆರೋಪಿಯನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಸೋನಿ (27) ಪ್ರಧಾನ ಆರೋಪಿಯಾಗಿದ್ದಾಳೆ.ಇದೇ ವೇಳೆ ತಪ್ಪಿಸಿಕೊಂಡಿರುವ ಇನ್ನಿಬ್ಬರು ಆರೋಪಿಗಳ ಪತ್ತೆಗೆ ಹುಡುಕಾಟ ನಡೆದಿದೆ.
ಘಟನೆ ವಿವರ: ಕೆಲ ದಿನಗಳ ಹಿಂದೆ ಆರೋಪಿ ಸೋನಿ ಜೈಲಿನಲ್ಲಿರುವ ತನ್ನ ತಂದೆಯ ಭೇಟಿಗೆ ತೆರಳಿದ್ದಳು ಆ ವೇಳೆ ಶಾಲು ಎನ್ನುವ ಕುಸ್ತಿ ಪಟು ಸಹ ಜೈಲಿಗೆ ತಂದೆಯನ್ನು ಕಾಣುವ ಸಲುವಾಗಿ ಆಗಮಿಸಿದ್ದಳು. ಆಗ ಸರತಿಯಲ್ಲಿ ನಿಲ್ಲುವ ವಿಚಾರದ ಕುರಿತು ಸೋನಿ ಹಾಗೂ ಶಾಲುವಿನ ನಡುವೆ ಜಗಳವಾಗಿತ್ತು. ಆಗ ಶಾಲುವಿಗೆ ಪಾಠ ಕಲಿಸಲು ಮುಂದಾದ ಸೋನಿ ತನ್ನ ಗೆಳೆಯ ವಿಜಯ್ ಹಾಗೂ ಇನ್ನೊಬ್ಬ ವ್ಯಕ್ತಿಯ ನೆರವಿನಿಂದ ಶಾಲುವಿನ ಮೇಲೆ .ಆ್ಯಸಿಡ್ ಎರಚುವ ಯೋಜನೆ ತಯಾರಿಸಿದ್ದಳು.
ಅದರಂತೆ ಮೀರತ್ ನಲ್ಲಿರುವ ಕ್ರೀಡಾಂಗಣಕ್ಕೆ ಅಭ್ಯಾಸಕ್ಕಾಗಿ ಶಾಲು ತನ್ನ ಗೆಳತಿ, ಬಾಕ್ಸರ್ ಆಗಿರುವ ಗರೀಮಾ (19) ಳೊಡನೆ ಆಗಮಿಸುತ್ತಿದ್ದಾಗ ಸೋನಿ ಹಾಗೂ ಸಹಚರರು ಅವರನ್ನು ಅಡ್ಡಗಟ್ಟಿ ಆ್ಯಸಿಡ್ ಎರಚಿದ್ದಾರೆ.
ಘಟನೆಯಲ್ಲಿ ಶಾಲುವಿನ ಬೆನ್ನಿಗೆ ಶೇ.20ರಷ್ಟು ಸುಟ್ಟ ಘಾಯಗಳಾಗಿದ್ದರೆ ಗರೀಮಾ ಅವರ ಮೊಣಕೈ ಸುಟ್ಟಿದೆ. ಇದೀಗ ಅವರುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.
ಮುಕ್ತ ಮಾರುಕಟ್ಟೆಯಲ್ಲಿ ಆ್ಯಸಿಡ್ ಮಾರಾಟವನ್ನು 2013ರಲ್ಲಿಯೇ ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಹಾಗಿದ್ದೂ ಆರೋಪಿಗಳು ಹೇಗೆ ಆ್ಯಸಿಡ್ ಪಡೆದಿದ್ದಾರೆ ಎನ್ನುವುದನ್ನು ತನಿಖೆ ನಡೆಸಿ ತಿಳಿದುಕೊಳ್ಳಲಾಗುತ್ತದೆ. ನಾಪತ್ತೆಯಾಗಿರುವ ಆರೋಪಿ ವಿಜಯ್ ಆ್ಯಸಿಡ್ ಸರಬರಾಜು ಮಾಡಿದ್ದಾನೆ ಎನ್ನಲಾಗಿದ್ದು ಅವನ ತಂದೆಯನ್ನು ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕೊಲೆಗೆ ಯತ್ನ, ಉದ್ದೇಶಪೂರ್ವಕ ಗಾಯಗೊಳಿಸುವ ಪ್ರಕರಣದಡಿಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡಿರುವುದಾಗಿ ಪೋಲೀಸರು ಮಾಹಿತಿ ನೀಡಿದರು.