ದೇಶ

ಪಾಕಿಸ್ತಾನದ ಯಾವುದೇ ಪ್ರಚೋದನೆಗೂ ಸೂಕ್ತ ಉತ್ತರ ನೀಡುತ್ತೇವೆ: ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್

Srinivasamurthy VN
ನವದೆಹಲಿ: ಅತ್ತ ಉರಿ ಸೆಕ್ಟರ್ ನಲ್ಲಿ ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿ ಭಾರತೀಯ ಯೋಧರ ಗುಂಡಿಗೆ 6 ಮಂದಿ ಉಗ್ರರು ಹತರಾದ ಬೆನ್ನಲ್ಲೇ ಇತ್ತ ದೆಹಲಿಯಲ್ಲಿ ಭಾರತೀಯ ಸೇನಾ ದಿನಾಚರಣೆ ಕಾರ್ಯಕ್ರಮದಲ್ಲಿ  ಮಾತನಾಡಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಪಾಕಿಸ್ತಾನದ ಯಾವುದೇ ಪ್ರಚೋದನೆಗೂ ಸೂಕ್ತ ಉತ್ತರ ನೀಡುತ್ತೇವೆ ಎಂದು ಹೇಳಿದ್ದಾರೆ.
ಭಾರತೀಯ ಸೇನಾ ದಿನಾಚರಣೆ ನಿಮಿತ್ತ ದೆಹಲಿಯ ಮಾರ್ಷಲ್ ಕಾರ್ಯಪ್ಪ ಪರೇಡ್ ಮೈದಾನದಲ್ಲಿ ಆಯೋಜನೆಯಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ ಬಳಿಕ ಸೇನೆಯನ್ನು ಉದ್ದೇಶಿಸಿ  ಮಾತನಾಡಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು, ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಅಲ್ಲದೆ ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ದಾಳಿ ನಡೆಸುತ್ತಿದೆ. ಆದರೆ  ಪಾಕಿಸ್ತಾನದ ಯಾವುದೇ ರೀತಿಯ ಪ್ರಚೋದನೆಗಳಿಗೆ ಅದರದ್ದೇ ಆದ ಧಾಟಿಯಲ್ಲಿ ತಿರುಗೇಟು ನೀಡುವ ಸಾಮರ್ಥ್ಯ ಭಾರತಕ್ಕಿದೆ ಎಂಬುದನ್ನು ಆ ದೇಶ ಮರೆಯಬಾರದು ಎಂದು ಹೇಳಿದರು.
ಅಂತೆಯೇ ಒಂದು ವೇಳೆ ಪಾಕಿಸ್ತಾನ ತನ್ನ ದುರ್ನಡೆಯನ್ನು ಮುಂದುವರೆಸಿದರೆ, ಪ್ರಸ್ತುತ ನಾವು ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಗಿಂತಲೂ ಕಠಿಣವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ನಾವು ಸ್ವತಂತ್ರರಾಗಿದ್ದೇವೆ.  ಕಾಶ್ಮೀರದಲ್ಲಿ ಪಾಕಿಸ್ತಾನ ಮೂಲದ ದುಷ್ಟ ಶಕ್ತಿಗಳು ಸಮಸ್ಯೆಯನ್ನು ಉಂಟು ಮಾಡುತ್ತಿದ್ದು, ಸಾಮಾಜಿಕ ಜಾಲತಾಣಗಳನ್ನು ನಮ್ಮ ವಿರುದ್ಧ ಅಪಪ್ರಚಾರಕ್ಕಾಗಿ ಬಳಕೆ ಮಾಡಲಾಗುತ್ತಿದೆ. ಈ ಬಗ್ಗೆ ನಾವು ತುಂಬಾ  ಜಾಗರೂಕರಾಗಿರಬೇಕು ಎಂದು ಹೇಳಿದರು.
ಇದಲ್ಲದೇ ಈಶಾನ್ಯ ಭಾರತದ ಗಡಿ ಪ್ರದೇಶದ ಕುರಿತು ಮಾತನಾಡಿದ ಬಿಪಿನ್ ರಾವತ್ ಅವರು, ನಮ್ಮ ಪ್ರಬಲ ಗುಪ್ತಚರ ಸಾಮರ್ಥ್ಯ ಹಾಗೂ ಜನ ಸ್ನೇಹಿ ಕಾರ್ಯಾಚರಣೆಗಳಿಂದಾಗಿ ಈಶಾನ್ಯ ಭಾರತದ ಗಡಿಗಳಲ್ಲಿ  ಭಯೋತ್ಪಾದನೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು. ಇದಕ್ಕೂ ಮೊದಲು ಸೇನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೈನಿಕರಿಂದ ಗೌರವ ವಂದನೆ ಸ್ವೀಕರಿಸಿದರು, ಬಳಿಕ  ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 15 ಯೋಧರಿಗೆ ಸೇನಾ ಪದಕ ಪ್ರದಾನ ಮಾಡಿ ಗೌರವಿಸಿದರು. ಈ ಪೈಕಿ ಐದು ಪದಕಗಳು ಮರಣೋತ್ತರ ಪದಕಗಳಾಗಿದ್ದವು.
SCROLL FOR NEXT