ಹುತಾತ್ಮರಾದ ಯೋಧ ಚಂದನ್ ಕುಮಾರ್ ರಾಯ್
ಪೂಂಚ್ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮಂಧಾರ್ ಸೆಕ್ಟರ್ ಬಳಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಪಾಕಿಸ್ತಾನದ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಕೆ ಓರ್ವ ಭಾರತೀಯ ಯೋಧ ಹುತಾತ್ಮರಾಗಿದ್ದಾರೆಂದು ಭಾನುವಾರ ತಿಳಿದುಬಂದಿದೆ.
ಚಂದನ್ ಕುಮಾರ್ ರಾಯ್ (25) ಹುತಾತ್ಮರಾದ ಯೋಧರಾಗಿದ್ದಾರೆಂದು ತಿಳಿದುಬಂದಿದೆ. ಮಂಧಾರ್ ಸೆಕ್ಟರ್ ನ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಭಾರತೀಯ ಸೇನೆಯನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡಿನ, ಮಾರ್ಟರ್ ಶೆಲ್'ಗಳ ದಾಳಿ ನಡೆಸಿದ್ದು, ಪಾಕಿಸ್ತಾನದ ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡುತ್ತಿದೆ ಎಂದು ಭಾರತೀಯ ಸೇನೆ ಹೇಳಿದೆ.
ಪಾಕಿಸ್ತಾನದ ಸೇನೆ ಅಪ್ರಚೋದಿತ ಗುಂಡಿನ ದಾಳಿಗೆ ದಿಟ್ಟ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಯೋಧ ಚಂದನ್ ರಾಯ್ ಅವರು ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಸೇನೆಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಚಂದನ್ ರಾಯ್ ಅವರು ಹುತಾತ್ಮರಾಗಿದ್ದಾರೆಂದು ತಿಳಿದುಬಂದಿದೆ.
ಕಳೆದ 5 ದಿನಗಳಿಂದಲೂ ಪಾಕಿಸ್ತಾನ ಗಡಿಯಲ್ಲಿ ಪದೇ ಪದೇ ಕದನ ವಿರಾಮವನ್ನು ಉಲ್ಲಂಘನೆ ಮಾಡುತ್ತಲೇ ಇದೆ. ಭಾರತೀಯ ಸೇನೆ ಹಾಗೂ ಗಡಿ ನಾಗರೀಕ ಪ್ರದೇಶಗಳನ್ನು ಗುರಿ ಮಾಡಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ.