ನವದೆಹಲಿ: ವಿವಾದಿತ ಪದ್ಮಾವತ್ ಚಿತ್ರ ಬಿಡುಗಡೆಗೆ ಇನ್ನು ಒಂದು ದಿನವಷ್ಟೇ ಬಾಕಿಯಿದ್ದು, ಚಿತ್ರದ ಕೆಲ ದೃಶ್ಯಗಳನ್ನು ತೆಗೆದು ಹಾಕುವಂತೆ ಕೋರಿ ಸಲ್ಲಿಸಲಾಗಿದ್ದ ತುರ್ತು ಅರ್ಜಿ ಪರಿಶೀಲನೆ ನಡೆಸಲು ಸುಪ್ರೀಂಕೋರ್ಟ್ ಬುಧವಾರ ನಿರಾಕರಿಸಿದೆ.
ಪದ್ಮಾವತ್ ಚಿತ್ರದ ಕೆಲ ದೃಶ್ಯಗಳಿಗೆ ತೆಗೆದುಹಾಕುವಂತೆ ಕೋರಿ ವಕೀಲ ಮನೋಹರ್ ಲಾಲ್ ಶರ್ಮಾ ಎಂಬುವವರು ತುರ್ತು ವಿಚಾರಣೆಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಪರಿಶೀಲನೆ ನಡೆಸಲು ನಿರಾಕರಿಸಿರುವ ಸುಪ್ರೀಂಕೋರ್ಟ್, ಚಿತ್ರದಲ್ಲಿರುವ ಮತ್ತಾವುದೇ ದೃಶ್ಯಗಳಿಗೂ ಕತ್ತರಿ ಪ್ರಯೋಗಿಸುವುದಿಲ್ಲ ಎಂದು ಹೇಳಿದ್ದು, ಅರ್ಜಿಯ ಕುರಿತ ವಿಚಾರಣೆಯನ್ನು ಮುಂದಿನ ಸೋಮವಾರ ನಡೆಸುವುದಾಗಿ ತಿಳಿಸಿದೆ.
ಪದ್ಮಾವತ್ ಸಿನಿಮಾವನ್ನು ಮಧ್ಯಪ್ರದೇಶ, ಹರಿಯಾಣ, ಗುಜರಾತ್ ಹಾಗೂ ರಾಜಸ್ತಾನ ರಾಜ್ಯಗಳಲ್ಲಿ ಬಿಡುಗಡೆ ಮಾಡುವುದಕ್ಕೆ ನಿಷೇಧ ಹೇರಲಾಗಿತ್ತು. ಈ ಹಿನ್ನಲೆಯಲ್ಲಿ ಚಿತ್ರದ ತಂಡ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯನ್ನು ಪರಿಶೀಲನೆ ನಡೆಸಿದ್ದ ನ್ಯಾಯಾಲಯ ನಾಲ್ಕು ರಾಜ್ಯಗಳ ಆದೇಶಕ್ಕೆ ತಡೆ ನೀಡಿತ್ತು. ಬಳಿಕ ಆದೇಶವನ್ನು ಮರುಪರಿಶೀಲನೆ ನಡೆಸುವಂತೆ ಮಧ್ಯಪ್ರದೇಶ, ಹರಿಯಾಣ, ಗುಜರಾತ್ ಹಾಗೂ ರಾಜಸ್ತಾನ ಸರ್ಕಾರಗಳು ಸುಪ್ರೀಂಕೋರ್ಟ್ ಬಳಿ ಮನವಿ ಮಾಡಿತ್ತು. ಈ ಮನವಿಯನ್ನು ನ್ಯಾಯಾಲಯದ ತಿರಸ್ಕರಿಸಿತ್ತು. ನ್ಯಾಯಾಲಯದ ಆದೇಶ ಹಿನ್ನಲೆಯಲ್ಲಿ ಪದ್ಮಾವತ್ ಚಿತ್ರವನ್ನು ಜ.25 ರಂದು ಬಿಡುಗಡೆಗೊಳ್ಳಲಿದೆ.