ವಾಘಾ: ದೇಶದಾದ್ಯಂತ 69ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಂತಸ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಿಸಿಲುವ ಪಾಕಿಸ್ತಾನದ ಸೈನಿಕರೊಂದಿಗೆ ಸಿಹಿ ವಿನಿಮಯ ಮಾಡಿಕೊಳ್ಳುವುದಕ್ಕೆ ಗಡಿ ಭದ್ರತಾ ಪಡೆಗಳು ನಿರಾಕರಿಸಿದೆ ಎಂದು ಶುಕ್ರವಾರ ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರ ಸೇರಿದಂದೆತ ದೇಶದ ವಿವಿಧ ಭಾಗದ ಅಂತರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು, ಭಾರತೀಯ ಯೋಧರು ಹಾಗೂ ನಾಗರೀಕರನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡಿನ ಹಾಗೂ ಶೆಲ್ ಗಳ ದಾಳಿ ನಡೆಸುತ್ತಲೇ ಇದೆ. ಈ ಹಿನ್ನಲೆಯಲ್ಲಿ ಬಿಎಸ್ಎಫ್ ಪಡೆ ಪಾಕಿಸ್ತಾನದೊಂದಿಗೆ ಸಿಹಿ ಹಂಚಿಕೊಳ್ಳಲು ನಿರಾಕರಿಸಿರುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.
ಗಣರಾಜ್ಯೋತ್ಸವ ದಿನದಂದು ಯಾವುದೇ ರೀತಿಯ ಸಿಹಿ ಹಂಚಿಕೆಯಿಲ್ಲ ಎಂದು ಪಾಕಿಸ್ತಾನ ಸೈನಿಕರಿಗೆ ತಿಳಿಸಲಾಗಿದೆ ಎಂದು ಬಿಎಸ್ಎಫ್ ಮೂಲಗಳು ಮಾಹಿತಿ ನೀಡಿದೆ.
ಭಾರತ ಮತ್ತು ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆ ಪ್ರಮುಖ ಹಬ್ಬಗಳಾದ ದೀಪಾವಳಿ, ಈದ್ ಮಿಲಾದ್ ಹಾಗೂ ಭಾರತದ ಗಣರಾಜ್ಯೋತ್ಸವ ದಿನಾಚರಣೆಯಂದು ಗಡಿಯಲ್ಲಿನ ಭಾರತ ಮತ್ತು ಪಾಕಿಸ್ತಾನ ಯೋಧರು ಪರಸ್ಪರ ಸಿಹಿ ವಿತರಿಸಿ ಉಡುಗೊರೆಯನ್ನು ವಿನಿಮಯ ಮಾಡಿಕೊಳ್ಳುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.