ಮೋದಿ ತಮ್ಮ 'ಮನ್ ಕಿ ಬಾತ್' ಅನ್ನು ಮತ್ತೊಬ್ಬರಿಂದ ಕೇಳಲಿಚ್ಛಿಸುತ್ತಾರೆ: ರಾಹುಲ್ ಗಾಂಧಿ ವ್ಯಂಗ್ಯ
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತ್ತೆ ವಾಗ್ದಾಳಿ ನಡೆಸಿದ್ದು, ಮೋದಿ ತಮ್ಮ ಮನ್ ಕಿ ಬಾತ್ ಅನ್ನು ಮತ್ತೊಬ್ಬರಿಂದ ಕೇಳಲು ಇಷ್ಟ ಪಡುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತ್ತೆ ವಾಗ್ದಾಳಿ ನಡೆಸಿದ್ದು, ಮೋದಿ ತಮ್ಮ ಮನ್ ಕಿ ಬಾತ್ ಅನ್ನು ಮತ್ತೊಬ್ಬರಿಂದ ಕೇಳಲು ಇಷ್ಟ ಪಡುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ನಮೋ ಆ್ಯಪ್ ಮೂಲಕ ಸಾರ್ವಜನಿಕರೊಂದಿಗೆ ಚರ್ಚೆ ನಡೆಸುತ್ತಿದ್ದ ವೇಳೆ ಸ್ಥಳೀಯ ಬಿಜೆಪಿ ಮುಖಂಡರು ಮಹಿಳೆಯೊಬ್ಬರ ಮೇಲೆ ಒತ್ತಡ ಹೇರಿ ಆಕೆಯ ಸೀತಾಫಲ ಬೆಳೆಯಿಂದ ದ್ವಿಗುಣ ಲಾಭ ಬಂದ ಕುರಿತು ಹೇಳಿಕೆ ನೀಡುವಂತೆ ಒತ್ತಾಯ ಹೇರಿದ್ದರು ಎಂಬ ಸುದ್ದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಎಲ್ಲರೂ ಎಲ್ಲಾ ಕಾಲ ಹೊಗಳುತ್ತಿರಬೇಕು ಎಂದು ಭಾವಿಸುತ್ತಾರೆ. ತಮ್ಮ ಮನ್ ಕಿ ಬಾತ್ ಅನ್ನು ಮತ್ತೊಬ್ಬರಿಂದ ಕೇಳಲಿಚ್ಛಿಸುತ್ತಾರೆ ಎಂದು ರಾಹುಲ್ ಗಾಂಧಿ ವ್ಯಂಗ್ಯ ಮಾಡಿದ್ದಾರೆ.
ಎಲ್ಲರಿಗೂ ಗೊತ್ತು ಪ್ರಧಾನಿ ಮೋದಿ ಪ್ರತೀ ವಾರ ಮನ್ ಕಿ ಬಾತ್ ಹೇಳುತ್ತಾರೆ ಎಂದು.. ಆದರೆ ಅವರು ತಮ್ಮ ಮನ್ ಕಿ ಬಾತ್ ಅನ್ನು ಮತ್ತೊಬ್ಬರಿಂದ ಕೇಳಲಿಚ್ಛಿಸುತ್ತಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ಮಾಧ್ಯಮವೊಂದು ಛತ್ತೀಸ್ ಘಡದ ಕಂಕರ್ ಮೂಲದ ಮಹಿಳೆಯೊಬ್ಬರ ಕುರಿತು ವರದಿ ಪ್ರಸಾರ ಮಾಡಿತ್ತು. ಈ ವೇಳೆ ಮಹಿಳೆ ಸ್ಥಳೀಯ ಬಿಜೆಪಿ ಮುಖಂಡರು ಪ್ರಧಾನಿ ನರೇಂದ್ರ ಮೋದಿ ನಮೋ ಆ್ಯಪ್ ಮೂಲಕ ರೈತರೊಂದಿಗೆ ಸಂವಾದ ನಡೆಸುವ ವೇಳೆ ತಮ್ಮನ್ನು ಬೆದರಿಸಿ ತಮ್ಮ ಕೃಷಿ ಬೆಳೆಗೆ ದ್ವಿಗುಣ ಲಾಭ ಬಂತು ಎಂದು ಹೇಳಿಸಿದ್ದರು. ಈ ಕುರಿತು ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಯಾಗಿತ್ತು.
ಸ್ಥಳೀಯ ಬಿಜೆಪಿ ಮುಖಂಡರು ಈ ಆರೋಪವನ್ನು ತಳ್ಳಿ ಹಾಕಿದ್ದರು.