ದೇಶ

ಅಂತರ್ಜಾತಿ ವಿವಾಹದಡಿ ಡಾ.ಅಂಬೇಡ್ಕರ್ ಯೋಜನೆಗೆ ನೀರಸ ಪ್ರತಿಕ್ರಿಯೆ; ಜನರಲ್ಲಿ ಅರಿವಿನ ಕೊರತೆ

Sumana Upadhyaya

ನವದೆಹಲಿ: ಅರಿವಿನ ಕೊರತೆಯಿಂದಾಗಿ ಡಾ ಅಂಬೇಡ್ಕರ್ ಯೋಜನೆ ಸರಿಯಾಗಿ ಜಾರಿಗೆ ಬರುತ್ತಿಲ್ಲ. ಕಳೆದ ವರ್ಷ ದೇಶಾದ್ಯಂತ ಈ ಯೋಜನೆಯಡಿ ಕೇವಲ 136 ಜೋಡಿ ಅಂತರ್ಜಾತಿ ವಿವಾಹದಡಿ ಈ ಸೌಲಭ್ಯ ಪಡೆದುಕೊಂಡಿದ್ದಾರೆ.

ಸ್ವಾಯತ್ತ ಸಂಸ್ಥೆಯಾಗಿರುವ ಡಾ ಅಂಬೇಡ್ಕರ್ ಫೌಂಡೇಶನ್ ಕಳೆದ ವರ್ಷ 582 ಪ್ರಸ್ತಾವನೆಗಳನ್ನು ಸ್ವೀಕರಿಸಿದ್ದು ಅವುಗಳಲ್ಲಿ 136 ಪ್ರಸ್ತಾವನೆಗಳು ಅನುಮೋದನೆಗೊಂಡಿವೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇತರ ಶಿಫಾರಸ್ಸುಗಳು ಪರಿಗಣನೆಯ ಹಂತದಲ್ಲಿವೆ ಎಂದು ಅವರು ಹೇಳಿದರು.

2013ರಲ್ಲಿ ಆರಂಭಗೊಂಡ ಡಾ ಅಂಬೇಡ್ಕರ್ ಯೋಜನೆಯಡಿ ಅಂತರ್ಜಾತಿ ವಿವಾಹವಾಗುವ ಜೋಡಿಗೆ ಸಹಾಯಧನ ಸಿಗುತ್ತದೆ. ಈ ಯೋಜನೆಯಡಿ ವರ್ಷಕ್ಕೆ ಸುಮಾರು 500 ಜೋಡಿಗಳು ಅರ್ಜಿ ಸಲ್ಲಿಸಬಹುದು. ಪ್ರತಿ ಜೋಡಿಗೆ ಎರಡೂವರೆ ಲಕ್ಷ ರೂಪಾಯಿ ಸಿಗಲಿದ್ದು ಅವುಗಳಲ್ಲಿ 1.5 ಲಕ್ಷ ರೂಪಾಯಿಗಳನ್ನು ಹಣದ ರೂಪದಲ್ಲಿ ವಿವಾಹದ ನಂತರ ನೀಡಲಾಗುತ್ತದೆ. ಉಳಿದ ಮೊತ್ತವನ್ನು ಸ್ಥಿರ ಠೇವಣಿಯಾಗಿ ಇಡಲಾಗುತ್ತಿದ್ದು ಮೂರು ವರ್ಷಗಳ ನಂತರ ದಂಪತಿ ಹಣವನ್ನು ಪಡೆದುಕೊಳ್ಳಬಹುದು. ಅಸ್ಸಾಂ, ಛತ್ತೀಸ್ ಗಢ, ಗುಜರಾತ್, ಒಡಿಶಾ, ಪಂಜಾಬ್, ಸಿಕ್ಕಿಂ ಮತ್ತು ಉತ್ತರಾಖಂಡಗಳಲ್ಲಿ ಇದುವರೆಗೆ ಯಾರೂ ಇದರ ಲಾಭ ಪಡೆದುಕೊಂಡಿಲ್ಲ. ಈ ರಾಜ್ಯಗಳಲ್ಲಿ ಯಾವುದೇ ಪ್ರಸ್ತಾವನೆಗಳು ಅನುಮೋದನೆಗೊಂಡಿಲ್ಲ.

ತೆಲಂಗಾಣ ರಾಜ್ಯ ಈ ವಿಚಾರದಲ್ಲಿ ಮುಂಚೂಣಿಯಲ್ಲಿದ್ದು ಇಲ್ಲಿ 33 ದಂಪತಿಗಳಿಗೆ ಯೋಜನೆ ಅನುಮೋದನೆಯಾಗಿದೆ. ನಂತರದ ಸ್ಥಾನದಲ್ಲಿ ಆಂಧ್ರ ಪ್ರದೇಶವಿದ್ದು ಇಲ್ಲಿ 30 ದಂಪತಿ ಅನುದಾನ ಪಡೆದಿದ್ದಾರೆ. ತಮಿಳುನಾಡು ಮತ್ತು ಮಹಾರಾಷ್ಟ್ರಗಳಲ್ಲಿ 15 ಮಂದಿ ದಂಪತಿ ಹಣ ಪಡೆದುಕೊಂಡಿದ್ದಾರೆ. ಆದರೆ ಬಿಹಾರ, ಪಶ್ಚಿಮ ಬಂಗಾಳ, ಕರ್ನಾಟಕ, ಕೇರಳ, ಹಿಮಾಚಲ ಪ್ರದೇಶ, ರಾಜಸ್ತಾನ ಮತ್ತು ಹರ್ಯಾಣ ರಾಜ್ಯಗಳಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿಲ್ಲ.

ಈ ಯೋಜನೆಯ ಫಲ ಪಡೆಯಲು ಹಿಂದೂ ವಿವಾಹ ಕಾಯ್ದೆ 1955ರಡಿ ದಾಖಲಾತಿ ಮಾಡಿಕೊಂಡು ಅಂಬೇಡ್ಕರ್ ಯೋಜನೆಗೆ ವರ್ಷದೊಳಗೆ ದಾಖಲಾತಿ ಸಲ್ಲಿಸಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ.

SCROLL FOR NEXT