ದೇಶ

ಸರ್ಕಾರಿ ಆಶ್ರಯ ತಾಣದ ಸೆಕ್ಸ್ ಹಗರಣ: ಸಿಬಿಐ ತನಿಖೆಗೆ ಬಿಹಾರ ಸಿಎಂ ಶಿಫಾರಸು

Lingaraj Badiger
ಪಾಟ್ನಾ: ಸರ್ಕಾರಿ ಆಶ್ರಯ ತಾಣದಲ್ಲಿದ್ದ 40 ಬಾಲಕಿಯರ ಪೈಕಿ 21 ಬಾಲಕಿಯರ ಮೇಲೆ ಅಲ್ಲಿನ ಸಿಬ್ಬಂದಿ, ಅದಿಕಾರಿಗಳು ಹಾಗೂ ರಾಜಕಾರಣಿಗಳು ನಿರಂತರ ಅತ್ಯಾಚಾರ ಎಸಗಿದ ಪ್ರಕರಣ ತನಿಖೆಯನ್ನು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಸಿಬಿಐಗೆ ಒಪ್ಪಿಸಿದ್ದಾರೆ.
ಮುಜಾಫರ್ ಪುರದ ಸರ್ಕಾರಿ ಆಶ್ರಯ ತಾಣದಲ್ಲಿ ನಡೆದ ಸೆಕ್ಸ್ ಹಗರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂಬ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ನಿತೀಶ್ ಕುಮಾರ್ ಅವರು ಇಂದು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಾರೆ.
ಕೇವಲ ಸಿಬಿಐ ತನಿಖೆಗೆ ಒಪ್ಪಿಸಿದರೆ ಸಾಕಾಗುವುದಿಲ್ಲ ಈ ಹಗರಣದ ಹೊಣೆ ಹೊತ್ತು ನಿತೀಶ್‌ ಕುಮಾರ್‌ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿವೆ. 
ನಿನ್ನೆಯಷ್ಟೇ ಆರ್ ಜೆಡಿಯ ತೇಜಶ್ವಿ ಯಾದವ್ ನೇತೃತ್ವದ ಒಂಬತ್ತು ಸದಸ್ಯರನ್ನೊಳಗೊಂಡ ಪ್ರತಿಪಕ್ಷ ತಂಡ ಸರ್ಕಾರಿ ಆಶ್ರಯ ತಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಬಳಿಕ ಆರೋಪಿಗಳನ್ನು ರಾಜ್ಯ ಸರ್ಕಾರ ರಕ್ಷಿಸುತ್ತಿದೆ ಎಂದು ಆರೋಪಿಸಿದ್ದರು.
ಈ ಮಧ್ಯೆ ಬಂಧಿತ ಆರೋಪಿಯ ಪತ್ನಿಯೊಬ್ಬರು ಸಮಾಜ ಕಲ್ಯಾಣ ಸಚಿವೆ ಮಂಜು ವರ್ಮಾ ಅವರ ಪತಿ ಈ ಸರ್ಕಾರಿ ಆಶ್ರಯ ತಾಣಕ್ಕೆ ಹಾಗಾಗ ಒಬ್ಬರೇ ಬರುತ್ತಿದ್ದರು ಎಂದು ಆರೋಪಿಸಿದ್ದರು. ಇದು ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿತ್ತು. ಆದರೆ ಮಂಜು ವರ್ಮಾ ಅವರು ಮಹಿಳೆಯ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. 
ಸರ್ಕಾರಿ ಆಶ್ರಯ ತಾಣದಲ್ಲಿ ಒಟ್ಟು 40 ಬಾಲಕಿಯರು ವಾಸಿಸುತ್ತಿದ್ದು, ಈ ಪೈಕಿ ಅರ್ಧದಷ್ಟು ಬಾಲಕಿಯರು ಅತ್ಯಾಚಾರಕ್ಕೆ ಒಳಗಾಗಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ.
SCROLL FOR NEXT