ನವದೆಹಲಿ: ಪಾಕಿಸ್ತಾನ ಸಾರ್ವತ್ರಿಕಾ ಚುನಾವಣಾ ಫಲಿತಾಂಶದಲ್ಲಿ ತಮಗೆ ಯಾವುದೇ ರೀತಿಯ ಅಚ್ಚರಿಯಾಗಿಲ್ಲ. ಅಲ್ಲಿನ ಸೇನೆಗೆ ಯಾವ ರೀತಿ ಫಲಿತಾಂಶ ಬೇಕಿತ್ತೋ ಅದೇ ರೀತಿಯ ಫಲಿತಾಂಶ ಬಂದಿದೆ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.
ನಿನ್ನೆ ಪಾಕಿಸ್ತಾನ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗುತ್ತಿದ್ದು, ಮಾಜಿ ಕ್ರಿಕೆಟಿಗ ಮತ್ತು ಹಾಲಿ ರಾಜಕಾರಣಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷ 272 ಕ್ಷೇತ್ರಗಳ ಪೈಕಿ 122 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕೇವಲ 65 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿರುವ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಿಎಂಎಲ್-ಎನ್ ಪಕ್ಷ ಈ ಬಾರಿ ಅಧಿಕಾರ ವಂಚಿತವಾಗಿದೆ.
ಈ ಹಿನ್ನಲೆಯಲ್ಲಿ ಮಾಧ್ಯಮಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಶಶಿತರೂರ್ ಅವರು, ಪ್ರಸ್ತುತ ದೊರೆತಿರುವ ಪಾಕಿಸ್ತಾನ ಚುನಾವಣಾ ಫಲಿತಾಂಶ ನನಗೆ ಯಾವುದೇ ರೀತಿಯ ಅಚ್ಚರಿಯನ್ನುಂಟು ಮಾಡಿಲ್ಲ, ಇದು ನಿರೀಕ್ಷಿತ ಫಲಿತಾಂಶವೇ. ಒಂದು ವರ್ಷದ ಹಿಂದೆಯೇ ಈ ಕುರಿತಂತೆ ಅಂದಾಜಿಸಲಾಗಿತ್ತು. ಈ ಹಿಂದಿನ ಪಿಎಂಎಲ್ ಎನ್ ಅಂದರೆ ನವಾಜ್ ಷರೀಫ್ ನೇತೃತ್ವದ ಸರ್ಕಾರದ ಮುಂದುವರಿಕೆ ಪಾಕಿಸ್ತಾನ ಸೇನೆಗೆ ಬೇಕಿರಲಿಲ್ಲ. ಅದು ಬದಲಾವಣೆ ಬಯಸುತ್ತಿತ್ತು. ಹೀಗಾಗಿ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷ ಅವರಿಗೆ ಪರ್ಯಾಯವಾಗಿ ಕಂಡಿತ್ತು ಎಂದು ಹೇಳಿದ್ದಾರೆ.
ಅಂತೆಯೇ ಪಾಕಿಸ್ತಾನ ಚುನಾವಣಾ ಫಲಿತಾಂಶದಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಕ್ಷ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ನಿಜ. ಆದರೆ ಅದಕ್ಕೆ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಅವರು ಅನಿವಾರ್ಯವಾಗಿ ಪಕ್ಷೇತರ ಮತ್ತು ಸಣ್ಣ ಪಕ್ಷಗಳ ಮೇಲೆ ಅವಲಂಬನೆಯಾಗುವುದು ಅನಿವಾರ್ಯ. ಆದರೆ ಈ ಸಣ್ಣ ಪಕ್ಷಗಳು ಮತ್ತು ಪಕ್ಷೇತರರು ಪಾಕಿಸ್ತಾನ ಸೇನೆಗೆ ನಿಷ್ಟರಾಗಿದ್ದು, ಸೇನೆ ನಿರ್ದೇಶನದಂತೆಯೇ ನಡೆಯುತ್ತಾರೆ ಎಂದು ಶಶಿತರೂರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics