ಇಂಜಿನ್ ಹಸ್ತಾಂತರಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಸಂಪೂರ್ಣ ಸ್ವದೇಶಿ ನಿರ್ಮಿತ 'ಬಹು ಇಂಧನ ಯುದ್ಧ ಟ್ಯಾಂಕರ್ ಇಂಜಿನ್' ಅನ್ನು ಭಾರತೀಯ ಸೇನೆಗೆ ಹಸ್ತಾಂತರ ಮಾಡಲಾಯಿತು.
ಚೆನ್ನೈನ ಅವದಿಯಲ್ಲಿರುವ ಸೇನಾ ಇಂಜಿನ್ ತಯಾರಿಕಾ ಕಾರ್ಖಾನೆಯಲ್ಲಿ ನಡೆದ ಹಸ್ತಾಂತರ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎರಡು ವಿಧದ 'ಬಹು ಇಂಧನ ಯುದ್ಧ ಟ್ಯಾಂಕರ್ ಇಂಜಿನ್' ಗಳನ್ನು ಭಾರತೀಯ ಸೇನೆಗೆ ಹಸ್ತಾಂತರ ಮಾಡಿದರು. ಸ್ವದೇಶಿ ನಿರ್ಮಿತ ಟಿ-90 ಭೀಷ್ಮಾ ಯುದ್ಧ ಟ್ಯಾಂಕರ್ ಗೆ ಅಳವಡಿಸಲಾಗುವ ಒಂದು ಸಾವಿರ ಅಶ್ವಬಲ ಸಾಮರ್ಥ್ಯದ ವಿ92S2 ಎಂಜಿನ್ ಮತ್ತು ಟಿ-72 ಅಜೇಯ ಟ್ಯಾಂಕರ್ ಗೆ ಅಳವಡಿಸುವ ವಿ-46-6 ಇಂಜಿನ್ ಗಳನ್ನು ನಿರ್ಮಲಾ ಸೀತಾರಾಮನ್ ಅವರು ಸೇನೆಗೆ ಹಸ್ತಾಂತರಿಸಿದರು.
ಭಾರತೀಯ ಸೇನಾ ಸಿಬ್ಬಂದಿಗಳ ಉಪ ಮುಖ್ಯಸ್ಥರಿಗೆ ನಿರ್ಮಲಾ ಸೀತಾರಾಮನ್ ಅವರು ಎರಡೂ ಮಾದರಿಯ ಇಂಜಿನ್ ಗಳನ್ನು ಹಸ್ತಾಂತರಿಸಿದರು.
ಇಂಜಿನ್ ಗಳ ವಿಶೇಷತೆ ಏನು ಗೊತ್ತಾ?
ವಿ92S2 ಎಂಜಿನ್ ಮತ್ತು ವಿ-46-6 ಇಂಜಿನ್ ಗಳ ಸಂಪೂರ್ಣ ಸ್ವದೇಶಿ ನಿರ್ಮಾಣವಾಗಿದ್ದು, ಈ ಇಂಜಿನ್ ಗಳಲ್ಲಿ ಅಳವಡಿಸಲಾಗಿರುವ ಶೇ.100ರಷ್ಟು ಬಿಡಿಭಾಗಗಳು ಭಾರತದಲ್ಲೇ ತಯಾರಾಗಿವೆ. ಈ ಇಂಜಿನ್ ತಯಾರಿಕೆಯಲ್ಲಿ ರಷ್ಯಾ ಸಹಯೋಗವಿದ್ದು, ಮೇಕ್ ಇನ್ ಇಂಡಿಯಾ ಅಡಿಯಲ್ಲಿ ರಷ್ಯನ್ ವಿನ್ಯಾಸ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಸ್ವದೇಶಿ ಕಚ್ಛಾ ವಸ್ತುಗಳಿಂದ ಇಂಜಿನ್ ಬಿಡಿಭಾಗಗಳನ್ನೇ ದೇಶೀಯ ಕಂಪನಿಗಳ ಮೂಲಕ ತಯಾರಿಸಲಾಗಿದೆ.
ಈ ಮಹತ್ವಾಕಾಂಕ್ಷಿ ಇಂಜಿನ್ ತಯಾರಿಕೆಗಾಗಿ ಚೆನ್ನೈನಲ್ಲಿರುವ ಇಎಫ್ಎ (ಇಂಜಿನ್ ಫ್ಕಾಕ್ಚರಿ ಅವದಿ)ಯ ಸಿಬ್ಬಂದಿಗಳು ಅವಿರತ ಶ್ರಮ ಹಾಕಿದ್ದು. ಅವರ ಶ್ರಮದ ಫಲವಾಗಿಯೇ ಇಂದು ಈ ಶಕ್ತಿಶಾಲಿ ಇಂಜಿನ್ ಸೇನೆಗೆ ಸೇರ್ಪಡೆಯಾಗಿದೆ. ಈ ಇಂಜಿನ್ ಸಾವಿರ ಅಶ್ವಬಲ ಸಾಮರ್ಥ್ಯವನ್ನು ಹೊಂದಿದ್ದು, ಟರ್ಬೋ ಚಾರ್ಜರ್, ಸೂಪರ್ ಚಾರ್ಜರ್ ಮತ್ತು ಫ್ಯೂಲ್ ಇಂಜೆಕ್ಷನ್ ಪಂಪ್ ಗಳನ್ನು ಹೊಂದಿದೆ. ಈ ಮೂರೂ ಬಿಡಿಭಾಗಗಳನ್ನು ಈ ಹಿಂದೆ ರಷ್ಯಾದಿಂದ ತರಿಸಿಕೊಳ್ಳಲಾಗುತ್ತಿತ್ತು. ಆದರೆ ಈಗ ಇವುಗಳನ್ನು ಭಾರತದಲ್ಲೇ ತಯಾರಿಸಲಾಗುತ್ತಿದೆ. ಆ ಮೂಲಕ ಇಂಜಿನ್ ಆಮದಿಗೆ ಖರ್ಚಾಗುತ್ತಿದ್ದ ಹೆಚ್ಚುವರಿ ಹಣದ ಉಳಿತಾಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics