ದೇಶ

ಅಮಾನ್ಯೀಕರಣ: ಅತಿ ಹೆಚ್ಚು ಹಳೆಯ ನೋಟುಗಳನ್ನು ಸಂಗ್ರಹಿಸಿದ ಅಮಿತ್ ಶಾ ನಿರ್ದೇಶಕತ್ವದ ಸಹಕಾರಿ ಬ್ಯಾಂಕ್!

Srinivas Rao BV
ಮುಂಬೈ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಿರ್ದೇಶಕರಾಗಿರುವ ಜಿಲ್ಲಾ ಸಹಕಾರಿ ಬ್ಯಾಂಕ್ ಡಿಸಿಸಿಬಿಗಳ ಪೈಕಿ ಅತಿ ಹೆಚ್ಚು ಪ್ರಮಾಣದಲ್ಲಿ ಅಮಾನ್ಯೀಕರಣಗೊಂಡಿರುವ 500-1000 ರೂಪಾಯಿ ನೋಟುಗಳನ್ನು ಸಂಗ್ರಹಿಸಿದೆ. 
ಆರ್ ಟಿಐಗೆ ಬಂದಿರುವ ಪ್ರತಿಕ್ರಿಯೆ ಮೂಲಕ ಈ ಮಾಹಿತಿ ಬಹಿರಂಗಗೊಂಡಿದ್ದು, ಅಹ್ಮದಾಬಾದ್ ನ ಜಿಲ್ಲಾ ಕೋ-ಆಪರೇಟೀವ್ ಬ್ಯಾಂಕ್(ಎಡಿಸಿಬಿ) ನೋಟು ಅಮಾನ್ಯೀಕರಣಗೊಂಡ ಕೇವಲ 56 ದಿನಗಳಲ್ಲಿ 745.59 ಕೋಟಿ ಮೌಲ್ಯದ 500, 1000 ರೂ ಮುಖಬೆಲೆಯ ಹಳೆಯ ನೋಟುಗಳನ್ನುಸಂಗ್ರಹಿಸಿತ್ತು ಎಂದು ತಿಳಿದುಬಂದಿದೆ. 
ಕಪ್ಪು ಹಣವನ್ನು ಸಹಕಾರಿ ಬ್ಯಾಂಕ್ ಗಳಲ್ಲಿ ವರ್ಗಾವಣೆ ಮಾಡಿ ಸಕ್ರಮ ಹಣವನ್ನಾಗಿ ಮಾಡಿಕೊಳ್ಳಲಾಗುವುದನ್ನು ತಪ್ಪಿಸಲು 5 ದಿನಗಳ ನಂತರ ಹಳೆಯ ನೋಟುಗಳನ್ನು ಸ್ವೀಕರಿಸದಂತೆ ಎಲ್ಲಾ ಸಹಕಾರಿ ಬ್ಯಾಂಕ್ ಗಳಿಗೂ ನಿರ್ಬಂಧ ವಿಧಿಸಲಾಗಿತ್ತು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಹ್ಮದಾಬಾದ್ ನ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾಗಿ ಮುಂದುವರೆದಿದ್ದು, 2016-17 ರ ಸಾಲಿನಲ್ಲಿ ಬ್ಯಾಂಕ್ ನ ನಿವ್ವಳ ಆದಾಯ 14.31 ಕೋಟಿಯಷ್ಟಾಗಿತ್ತು. 
ಎಡಿಸಿಬಿಯ ನಂತರದ ಸ್ಥಾನದಲ್ಲಿ ರಾಜ್ ಕೋಟ್ ಜಿಲ್ಲಾ ಸಹಕಾರಿ ಬ್ಯಾಂಕ್ ಇದ್ದು, ಗುಜರಾತ್ ಕ್ಯಾಬಿನೆಟ್ ಸಚಿವ ಜಯೇಶ್ ಭಾಯ್ ವಿಠಲ್ ಭಾಯ್ ರದಾದಿಯಾ ಬ್ಯಾಂಕ್ ನ ನಿರ್ದೇಶಕರಾಗಿದ್ದಾರೆ. ಈ ಬ್ಯಾಂಕ್ ನಲ್ಲಿ 693.19 ಕೋಟಿ ರೂಪಾಯಿ ಮೌಲ್ಯದ 500, 1000 ರೂ ಮುಖಬೆಲೆಯ ನೋಟುಗಳು ಸಂಗ್ರಹವಾಗಿತ್ತು. 
ರಾಜ್ ಕೋಟ್ ಗುಜರಾತ್ ರಾಜ್ಯದ ರಾಜಕೀಯ ಕೇಂದ್ರ ಪ್ರದೇಶವಾಗಿದ್ದು, ಪ್ರಧಾನಿ ಮೋದಿ ಮೊದಲ ಬಾರಿಗೆ ಗುಜರಾತ್ ಸಿಎಂ ಆದಾಗ ಇದೇ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ನೋಟು ಅಮಾನ್ಯೀಕರಣಗೊಂಡ ನಂತರ ಇದೇ ಮೊದಲ ಬಾರಿಗೆ ಈ ಮಾಹಿತಿ  ಬಹಿರಂಗಗೊಂಡಿದ್ದು, ಆರ್ ಟಿಐ ಕಾರ್ಯಕರ್ತ ಮನೋರಂಜನ್ ಎಸ್ ರಾಯ್ ಎಂಬುವವರು ಆರ್ ಟಿಐ ನಿಂದ ಮಾಹಿತಿ ಪಡೆದಿದ್ದಾರೆ. 
SCROLL FOR NEXT