ಅಹಮದಾಬಾದ್: 2002ರ ನರೋಡ ಪಟಿಯಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಸೋಮವಾರ ಮೂವರು ಅಪರಾಧಿಗಳಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನ್ಯಾಯಮೂರ್ತಿ ಹರ್ಷಾ ದೇವಾನಿ ಮತ್ತು ನ್ಯಾಯಮೂರ್ತಿ ಎಎಸ್ ಸುಪೆಯಿ ಅವರನ್ನೊಳಗೊಂಡ ವಿಭಾಗೀಯ ಪೀಠ, ಅಪರಾಧಿಗಳಾದ ಪಿಜೆ ರಜಪೂತ್, ರಾಜಕುಮಾರ್ ಚೌಮಾಲ್ ಮತ್ತು ಉಮೇಶ್ ಭರ್ವಾಡ್ ಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಕಳೆದ ಏಪ್ರಿಲ್ 20ರಂದು 16 ಅಪರಾಧಿಗಳ ಪೈಕಿ ಈ ಮೂವರಿಗೆ ಕೋರ್ಟ್ ಶಿಕ್ಷೆ ಪ್ರಮಾಣ ಪ್ರಕಟಿಸಿರಲಿಲ್ಲ. ಈ ಮೂವರು ಶಿಕ್ಷೆ ಪ್ರಮಾಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ಕೋರಿದ್ದರು. ಹೀಗಾಗಿ ಇಂದು ಮೂವರು ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಿದ ಕೋರ್ಟ್, ಆರು ವಾರಗಳಲ್ಲಿ ಪೊಲೀಸರಿಗೆ ಶರಣಾಗುವಂತೆ ಸೂಚಿಸಿದೆ.
ಏಪ್ರಿಲ್ 20ರಂದು ನರೋಡ ಪಟಿಯಾ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಸಚಿವೆ ಮಾಯಾಬೆನ್ ಕೊಡ್ನಾನಿ ಅವರನ್ನು ಖುಲಾಸೆಗೊಳಿಸಿದ್ದ ಗುಜರಾತ್ ಹೈಕೋರ್ಟ್, ಬಜರಂಗದಳದ ಮುಖಂಡ ಬಾಬು ಬಜರಂಗಿ ಅಪರಾಧವನ್ನು ಎತ್ತಿ ಹಿಡಿದಿತ್ತು.
ಗೋಧ್ರಾ ಹತ್ಯಾಕಾಂಡದ ಒಂದು ದಿನದ ನಂತರ ನಡೆದ ನರೋಡಾ ಹತ್ಯಾಕಾಂಡದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಟ್ಟು 96 ಮಂದಿ ಮೃತಪಟ್ಟಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics