ತಿರುಪುರ: ಕಳೆದ ಸೋಮವಾರ ನಾಪತ್ತೆಯಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಹತ್ತಿರದ ಸಂಬಂಧಿ, ಉದ್ಯಮಿ ಶಿವಮೂರ್ತಿ(47) ಅವರು ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಮೂವರು ಹಂತಕರನ್ನು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಮೂವರು ಅಪರಿಚಿತ ವ್ಯಕ್ತಿಗಳು ಶಿವಮೂರ್ತಿ ಅವರನ್ನು ಅಪಹರಿಸಿ ಹತ್ಯೆ ಮಾಡಿದ್ದು, ಮೃತದೇಹವನ್ನು ಕೃಷ್ಣಗಿರಿ ಸಮೀಪದ ಟ್ಯಾಂಕ್ ವೊಂದರಲ್ಲಿ ಬಿಸಾಡಿ ಹೋಗಿದ್ದಾರೆ.
ನೈಟ್ ವಿಯರ್ ಎಕ್ಸ್ ಪರ್ಟ್ ಕಂಪನಿ ನಡೆಸುತ್ತಿದ್ದ ಶಿವಮೂರ್ತಿ ಅವರು ಸೋಮವಾರ ತಮ್ಮ ಕಾರಿನಲ್ಲಿ ತಿರುಪುರದಿಂದ ಕೊಯಮತ್ತೂರಿಗೆ ಹೋಗಿದ್ದರು. ಆದರೆ ಮಂಗಳವಾರವೂ ಮನಗೆ ಬರದಿದ್ದರಿಂದ ಮತ್ತು ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಅನುಮಾನಗೊಂಡ ಕಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಖಚಿತ ಮಾಹಿತಿ ಆಧರಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳು ಶಿವಮೂರ್ತಿಯನ್ನು ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶಿವಮೂರ್ತಿಗೆ ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ವ್ಯಾಪಾರ ಪೈಪೋಟಿ ಹತ್ಯೆಗೆ ಕಾರಣವಾಗಿರಬಹುದು ಎನ್ನಲಾಗಿದೆ.