ರಾಜಧಾನಿ ಕೊಹಿಮಾದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಮೆರವಣಿಗೆ (ಸಂಗ್ರಹ ಚಿತ್ರ)
ಕೊಹಿಮಾ: ತ್ರಿಪುರಾ ವಿಜಯದ ಬೆನ್ನಲ್ಲೇ ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲೂ ಎನ್ ಡಿಪಿಪಿ ನೇತೃತ್ವದ ಬಿಜೆಪಿ ಮೈತ್ರಿಕೂಟ ಅಧಿಕಾರದ ಗದ್ದುಗೆಯತ್ತ ದಾಪುಗಾಲಿರಿಸಿದ್ದು, ಒಟ್ಟು 33 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಸ್ಪಷ್ಟ ಬಹುಮತದತ್ತ ದಾಪುಗಾಲಿರಿಸಿದೆ.
ಇತ್ತೀಚಿನ ವರದಿಗಳು ಬಂದಾಗ ನಾಗಾಲ್ಯಾಂಡ್ ವಿಧಾನಸಭೆಯ ಒಟ್ಟು 60 ಕ್ಷೇತ್ರಗಳ ಪೈಕಿ ಬಿಜೆಪಿ ಮೈತ್ರಿಕೂಟ ಎನ್ ಡಿಪಿಪಿ 33 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಎನ್ ಪಿಎಫ್ ಮೈತ್ರಿಕೂಟ 22 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಆ ಮೂಲಕ ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಮತ್ತು ಎನ್ ಡಿಪಿಪಿ ಮೈತ್ರಿ ಸರ್ಕಾರ ಬಹುತೇಕ ಖಚಿತವಾಗಿದ್ದು, ಈಗಾಗಲೇ ಮೈತ್ರಿಕೂಟ ಮ್ಯಾಜಿಕ್ ಸಂಖ್ಯೆ 31ನ್ನು ದಾಟಿ ಮುನ್ನುಗ್ಗುತ್ತಿದೆ.
ಇನ್ನು 2013ರ ವಿಧಾನಸಭಾ ಚುನಾವಣೆಯಲ್ಲಿ 38 ಸ್ಥಾನಗಳನ್ನು ಗಳಿಸಿ ಅಧಿಕಾರ ಹಿಡಿದಿದ್ದ ಎನ್ ಪಿಎಫ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಕೇವಲ 22 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಇನ್ನು ಅದೇ ಚುನಾವಣೆಯಲ್ಲಿ 8 ಸ್ಥಾನಗಳಿಸಿದ್ದ ಕಾಂಗ್ರೆಸ್ ಪಕ್ಷ ಈ ಬಾರಿ ಠೇವಣಿ ಕಳೆದುಕೊಂಡಿದ್ದು, ಕೇವಲ ಒಂದೇ ಒಂದು ಸ್ಥಾನವನ್ನೂ ಗೆಲ್ಲದೇ ತೀವ್ರ ಮುಜುಗರಕ್ಕೀಡಾಗಿದೆ.
ಉಳಿದಂತೆ ಇತರರು 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ ಎಂದು ತಿಳಿದುಬಂದಿದೆ.