ನವದೆಹಲಿ: ಹೇಗಾದರೂ ಸರಿ ತಾನು ಅಧಿಕಾರಕ್ಕೇರಬೇಕು ಎನ್ನುವ ಬಿಜೆಪಿಯ ಅಪಾಯಕಾರಿ ಆಟದಿಂದಾಗಿ ಈಶಾನ್ಯ ಭಾರತಕ್ಕೆ ಅಸ್ಥಿರತೆಯ ಭೀತಿ ಎದುರಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈಶಾನ್ಯ ಭಾರತಜದ ಮೂರು ರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲ ಅವರು, ಬಿಜೆಪಿ ಇತರೆ ಪಕ್ಷಗಳೊಂದಿಗೆ ಸೇರಿ ಈಶಾನ್ಯದ ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಸರ್ಕಾರ ರಚನೆಗೆ ಸಿದ್ಧವಾಗುತ್ತಿದೆ. ಆದರೆ ಬಿಜೆಪಿ ತನ್ನ ತತ್ವ ಸಿದ್ಧಾಂತಗಳನ್ನು ಮರೆತು ಅಧಿಕಾರಕ್ಕಾಗಿ ಕೆಟ್ಟ ಮತ್ತು ಅಪಾಯಕಾರಿ ಆಸ್ಥಿರತೆಯ ಆಟವನ್ನಾಡುತ್ತಿದೆ. ಬಿಜೆಪಿಯ ಈ ನಡೆಯಿಂದಾಗಿ ಈಶಾನ್ಯ ಭಾರತಕ್ಕೆ ಅಸ್ಥಿರತೆಯ ಅಪಾಯ ಎದುರಾಗಿದ್ದು, ಈಶಾನ್ಯ ಭಾರತದ ಭದ್ರತೆ, ಸಾಮಾಜಿಕ ಶಾಂತಿ ಮತ್ತು ಅಭಿವೃದ್ಧಿಗೆ ಇದರಿಂದ ಧಕ್ಕೆಯಾಗಲಿದೆ ಎಂದು ಹೇಳಿದ್ದಾರೆ.
ಅಂತೆಯೇ ಪ್ರಧಾನಿ ಮೋದಿ ರಾಜೀವ್ ಗಾಂಧಿ ಅವರನ್ನು ನೋಡಿ ಕಲಿಯಬೇಕಿದೆ. ರಾಜೀವ್ ಗಾಂಧಿ ಅವರು ದೇಶ ಮೊದಲು, ಪಕ್ಷ ಬಳಿಕ ಎಂಬ ಸಿದ್ಧಾಂತವನ್ನು ಪಾಲಿಸುತ್ತಿದ್ದರು. ಇದು ಮಿಜೋರಾಂ ಮತ್ತು ಅಸ್ಸಾಂನಲ್ಲಿ ಶಾಂತಿ ಸ್ಥಾಪನೆ ಮಾಡಿತ್ತು. ಆದರೆ ಮೋದಿ ಪಕ್ಷ ಮೊದಲು ದೇಶ ಬಳಿಕ ಎಂಬ ಆಪಾಯಕಾರಿ ನಡೆಯನ್ನು ಅನುಸರಿಸುತ್ತಿದ್ದಾರೆ. ಈಗಾಗಲೇ ಈಶಾನ್ಯ ಭಾರತೀಯರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಬಗ್ಗೆ ಅರವಿದೆ ಎಂದು ಭಾವಿಸುತ್ತೇನೆ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ನಡೆದ ಈಶಾನ್ಯ ಭಾರತದ ಮೂರು ರಾಜ್ಯಗಳ ಅಂದರೆ ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯ ವಿಧಾನಸಭೆ ಚುನಾವಣೆಯಲ್ಲಿ ಮೇಘಾಲಯ ಹೊರತು ಪಡಿಸಿ ಉಳಿದೆರಡು ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಜಯಭೇರಿ ಭಾರಿಸಿತ್ತು. ಆದರೆ ಮೇಘಾಲಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿ ಇದೀಗ ಮತ್ತೆ ಇಲ್ಲೂ ಬಿಜೆಪಿ ನೇತೃತ್ವದ ಮೈತ್ರಿಕೂಟ ಸರ್ಕಾರ ರಚನೆಗೆ ಮುಂದಾಗಿದೆ. ಬಿಜೆಪಿಗೆ ಇಲ್ಲಿ ಕೇವಲ 2 ಸ್ಥಾನಗಳೇ ಲಭಿಸಿದೆಯಾದರೂ ಹೆಚ್ಚು ಸ್ಥಾನಗಳನ್ನು ಗಳಿಸಿದ ಐದು ಪಕ್ಷಗಳನ್ನು ಒಗ್ಗೂಡಿಸಿಕೊಂಡು ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿದೆ.
ಕಾಂಗ್ರೆಸ್ ಮೈತ್ರಿಕೂಟ ಹೆಚ್ಚಿನ ಸ್ಥಾನ ಹೊಂದಿದ್ದರೂ ಬಿಜೆಪಿ ಮೈತ್ರಿಕೂಟ ಅದನ್ನು ಪಕ್ಕಕ್ಕೆ ಸರಿಸಿ ಇದೀಗ ಮೇಘಾಲಯದಲ್ಲೂ ಸರ್ಕಾರ ರಚನೆಗೆ ಮುಂದಾಗಿದೆ. ಈ ಹಿಂದೆ ಗೋವಾದಲ್ಲಿ ಇಂತಹುದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟ ಹೆಚ್ಚಿನ ಸ್ಥಾನಗಳಲ್ಲಿ ಜಯಿಸಿದ್ದರೂ ಕೊನೆಯ ಕ್ಷಣದಲ್ಲಿ ಸರ್ಕಾರ ರಚನೆ ಮಾಡುವಲ್ಲಿ ವಿಫಲವಾಗಿ ಮನೋಹರ್ ಪರಿಕ್ಕರ್ ನೇತೃತ್ವದಲ್ಲಿ ಬಿಜೆಪಿ ಮೈತ್ರಿಕೂಟ ಸರ್ಕಾರ ರಚನೆ ಮಾಡಿತ್ತು.
ಇದೇ ರೀತಿ ಇದೀಗ ಮೇಘಾಲಯದಲ್ಲೂ ಪರಿಸ್ಥಿತಿ ಕಂಡುಬರುತ್ತಿದ್ದ, ಕನ್ರಾಡ್ ಸಂಗ್ಮಾ ನೇತೃತ್ವದಲ್ಲಿ ಬಿಜೆಪಿ ಮೈತ್ರಿಕೂಟ ಸರ್ಕಾರ ರಚನೆ ಮಾಡುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics