ದೇಶ

ತ್ರಿಪುರಾದಲ್ಲಿ ಅಭಿವೃದ್ಧಿಯ ಹಣತೆ ಹಚ್ಚಿದ್ದೇವೆ: ಪ್ರಧಾನಿ ಮೋದಿ

Srinivasamurthy VN
ನವದೆಹಲಿ: ಈಶಾನ್ಯ ಭಾರತದ ತ್ರಿಪುರಾದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಿಕ್ಕೆ ತರುವ ಮೂಲಕ ಅಭಿವೃದ್ಧಿಯ ಬೆಳಕು ಹಚ್ಚಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಅಗರ್ತಲಾದಲ್ಲಿ ಇಂದು ನಡೆದ ಬಿಪ್ಲಬ್ ಕುಮಾರ್ ದೇಬ್ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ ಬಳಿಕ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. 
ಈ ವೇಳೆ, ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ್ದು, ಸರ್ಕಾರ ರಚನೆ ಮೂಲಕ ತ್ರಿಪುರಾದಲ್ಲಿ ಅಭಿವೃದ್ಧಿಯ ಹಣತೆ ಹಚ್ಚಿದ್ದೇವೆ. ನಿಜಕ್ಕೂ ತ್ರಿಪುರಾಗೆ ಇಂದು ಐತಿಹಾಸಿಕ ದಿನವಾಗಿದ್ದು, ರಾಜ್ಯದ ಜನತೆ ದೀಪಾವಳಿ ಆಚರಿಸುತ್ತಿದ್ದಾರೆ ಎಂಬ ಭಾವನೆ ಮೂಡುತ್ತಿದೆ. ತ್ರಿಪುರಾದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರ ರಚನೆ ಮಾಡುವ ಮೂಲಕ ಅಭಿವೃದ್ಧಿ ಮತ್ತು ಸಮೃದ್ಧಿಯ ಹಣತೆ ಹಚ್ಚಿದ್ದೇವೆ. ತ್ರಿಪುರಾ ಜನರಲ್ಲಿ ಹೊಸ ಹುರುಪು ಮತ್ತು ಉತ್ಸಾಹ ನೋಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭಾರತದ ಇತಿಹಾಸದಲ್ಲಿ ಕೆಲವೇ ಕೆಲವು ಚುನಾವಣೆಗಳು ಮಾತ್ರ ಸದಾಕಾಲ ಚರ್ಚೆಯಾಗುತ್ತಿರುತ್ತದೆ. ಆ ಪಟ್ಟಿಗೆ ಇದೀಗ 2018ರ ತ್ರಿಪುರಾ ವಿಧಾನಸಭೆ ಚುನಾವಣೆ ಕೂಡ ಸೇರಿದೆ. ಮುಂದಿನ ಸುಮಾರು ವರ್ಷಗಳ ವರೆಗೂ ತ್ರಿಪುರಾ ಚುನಾವಣೆಯನ್ನು ಜನ ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದರು. ಅಂತೆಯೇ ಬಿಜೆಪಿ ಜನ ಸ್ನೇಹಿ ಪಕ್ಷವಾಗಿದ್ದು, ಖಂಡಿತಾ ರಾಜ್ಯದಲ್ಲಿ ಮುಂದಿನ ಐದು ವರ್ಷಗಳ ಕಾಲ ಈ ಹಿಂದಿನ ಸರ್ಕಾರಗಲು ನೀಡಲಾಗದ ಅಭಿವೃದ್ಧಿ ಪರ ಸರ್ಕಾರವನ್ನು ನೀಡುತ್ತೇವೆ. ನಮ್ಮ ಹೊಸ ಯುವ ತಂಡ ಉತ್ಸಾಹದಿಂದ ಕೆಲಸ ಮಾಡಲು ಕಾಯುತ್ತಿದೆ ಎಂದು ಹೇಳಿದರು.
ಇದೇ ವೇಳೆ ನಿರ್ಗಮಿತ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಅವರಿಗೆ ಅನುಭವವಿದೆ. ಆದರೆ ನಮ್ಮಲ್ಲಿ ಉತ್ಸಾಹವಿದ್ದು, ತ್ರಿಪುರಾವನ್ನು ಅಭಿವೃದ್ಧಿ ರಾಜ್ಯವನ್ನಾಗಿ ರೂಪುಗೊಳಿಸುತ್ತೇವೆ. ಅಂತೆಯೇ ಬಿಪ್ಲಬ್ ದೇಬ್ ಅವರ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡುವುದಾಗಿಯೂ ಪ್ರಧಾನಿ ಮೋದಿ ಘೋಷಣೆ ಮಾಡಿದರು.
SCROLL FOR NEXT