ದೇಶ

ಸೇನಾ ನಿರ್ವಹಣೆಗೇ ರಕ್ಷಣಾ ನಿಧಿ ಬಳಕೆಯಾಗುತ್ತದೆ ಎಂಬುದು ಸುಳ್ಳು: ಸೇನಾ ಮುಖ್ಯಸ್ಥ ಬಿಪಿನ್ ರಾವತ್

Srinivasamurthy VN
ನವದೆಹಲಿ: ಸರ್ಕಾರದ ಬಜೆಟ್ ನಲ್ಲಿ ರಕ್ಷಣಾ ಇಲಾಖೆಗೆ ನೀಡಲಾಗುವ ಸಂಪೂರ್ಣ ಹಣ ಸೇನೆಯ ನಿರ್ವಹಣೆಗೇ ಬಳಕೆಯಾಗುತ್ತದೆ ಎಂಬುದು ಸುಳ್ಳು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು, ಬಜೆಟ್‌ನಲ್ಲಿ ಒದಗಿಸಲಾಗುವ ರಕ್ಷಣಾ ನಿಧಿಯನ್ನು ಸಂಪೂರ್ಣವಾಗಿ ಸೇನೆಯನ್ನು ನಿರ್ವಹಿಸುವುದಕ್ಕೇ ಬಳಸಲಾಗುತ್ತದೆ ಎಂಬ ಭಾವನೆ ಅನೇಕರಲ್ಲಿದೆ. ಆದರೆ ಇದು ತಪ್ಪು. ರಕ್ಷಣೆ ನೀಡಲಾಗುವ ನಿಧಿಯಲ್ಲಿ ಶೇ. 35ರಷ್ಟು ಹಣ ರಾಷ್ಟ್ರ ನಿರ್ಮಾಣಕ್ಕೆಂದು ವಿನಿಯೋಗವಾಗುತ್ತದೆ. ಉದಾಹರಣೆಯಾಗಿ ದೇಶದ ಗಡಿ ಪ್ರದೇಶಗಳಲ್ಲಿ ನಿರ್ಮಿಸಲಾಗುವ ರಸ್ತೆ, ಸೇತುವೆ ಇಂತಹ ಮೊದಲಾದ ಮೂಲ ಸೌಕರ್ಯಗಳಿಗಾಗಿ ವಿನಿಯೋಗಿಸಲಾಗುತ್ತದೆ. ಈ ಮೂಲ ಸೌಕರ್ಯಗಳಿಂದ ಗಡಿ ಭಾಗದಲ್ಲಿ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ವಾಸವಾಗಿರುವ ಭಾರತೀಯರನ್ನು ನಾವು ಮುಖ್ಯ ವಾಹಿನಿಗೆ ತರಲು ಸಾಧ್ಯವಾಗುತ್ತದೆ. ದೇಶವನ್ನು ಒಗ್ಗೂಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. 
ಇದೇ ವೇಳೆ ಚೀನಾ ಸೇನೆಯನ್ನು ಉದಾಹರಿಸಿದ ಬಿಪಿನ್ ರಾವತ್ ಅವರು, ಚೀನಾ ಸೇನೆ ಇಂದು ವಿಶ್ವದಲ್ಲಿ ಬಲಿಷ್ಟವಾಗಿದೆ ಎಂದರೆ ಅದಕ್ಕೆ ವಿತ್ತೀಯ ಕೊರತೆ ಇಲ್ಲದಿರುವುದೇ ಕಾರಣ. ಆರ್ಥಿಕ ಕೊರತೆ ಸೇನೆಯನ್ನು ಕಾಡಬಾರದು ಎಂಬ ಚೀನಾ ದೇಶದ ನಡೆಯೇ ಆ ದೇಶ ಸೇನೆಯನ್ನು ಇಂದು ಬಲಿಷ್ಟವಾಗಿರಿಸಿದೆ. ಇಂದು ಅಮೆರಿಕಕ್ಕೂ ಚೀನಾ ಸೇನೆ ಸೆಡ್ಡು ಹೊಡೆಯುತ್ತಿದೆ ಎಂದು ಹೇಳಿದರು.
ಅಂತೆಯೇ ಪದೇ ಪದೇ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡುವ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದ ಜನರಲ್‌ ರಾವತ್‌, "ನೀವು ನಿಮ್ಮ ದಾಳಿಯನ್ನು ಮೇಲ್ಮಟ್ಟಕ್ಕೆ ಒಯ್ದರೆ ನಾವೂ ನಮ್ಮ ಪ್ರತಿ ದಾಳಿಯನ್ನು ಮೇಲ್ಮಟ್ಟಕ್ಕೆ ಒಯ್ಯಲೇಬೇಕಾಗುತ್ತದೆ. ಗಡಿಯಲ್ಲಿನ ಚಕಮಕಿಯಿಂದ ಸೇನೆಗಿಂತಲೂ ಹೆಚ್ಚಾಗಿ ಜನರು ವ್ಯಾಪಕ ನಾಶ, ನಷ್ಟ,ಹಾನಿ ಅನುಭವಿಸುತ್ತಿದ್ದಾರೆ ಎಂದು ರಾವತ್ ಹೇಳಿದರು. 
SCROLL FOR NEXT