ದೇಶ

ಸೋನಿಯಾಜಿ ಸ್ನೇಹದ ವಿಸ್ತರಣೆಗಾಗಿ ಔತಣಕೂಟ ಏರ್ಪಡಿಸಿದ್ದರು: ಕಾಂಗ್ರೆಸ್

Sumana Upadhyaya

ನವದೆಹಲಿ: ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕಳೆದ ರಾತ್ರಿ ದೆಹಲಿಯ ತಮ್ಮ 10 ಜನಪಥ್ ನಿವಾಸದಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ 20 ವಿರೋಧ ಪಕ್ಷಗಳ ನಾಯಕರು ಭಾಗವಹಿಸಿದ್ದರು. 2019ರ ಲೋಕಸಭೆ ಚುನಾವಣೆಗೆ ಮುನ್ನ ದೇಶದ ಜಾತ್ಯತೀತ ಪಕ್ಷಗಳಲ್ಲಿ ಒಗ್ಗಟ್ಟು ತಂದು ಮೈತ್ರಿಯ ಸಾಧ್ಯತೆಗಳನ್ನು ವಿಸ್ತರಿಸಲು  ಈ ವೇದಿಕೆಯನ್ನು ಮುನ್ನುಡಿಯಾಗಿ ಬಳಸಿಕೊಳ್ಳಲಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಸ್ನೇಹ, ಸೌಹಾರ್ದ ಮತ್ತು ಸಮಾನ ಮನೋಭಾವ ಹಂಚಿಕೆಗೆ ಈ ಔತಣಕೂಟ ಏರ್ಪಡಿಸಲಾಗಿದೆ ಎಂಬುದು ಕಾಂಗ್ರೆಸ್ ನ ಹೇಳಿಕೆಯಾಗಿದೆ. ಸೋನಿಯಾ ಗಾಂಧಿಯವರು ಏರ್ಪಡಿಸಿದ ಔತಣಕೂಟದಲ್ಲಿ ಎನ್ ಸಿಪಿ, ಆರ್ ಜೆಡಿ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ತೃಣಮೂಲ ಕಾಂಗ್ರೆಸ್, ಡಿಎಂಕೆ ಮತ್ತು ಎಡಪಕ್ಷಗಳ ನಾಯಕರು ಭಾಗವಹಿಸಿದ್ದರು.

ಅವರಲ್ಲಿ ಬಹು ಮುಖ್ಯವಾದವರೆಂದರೆ ಎನ್ ಸಿಪಿಯ ಶರದ್ ಪವಾರ್, ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ವರ್ಮಾ, ಬಿಎಸ್ ಪಿಯ ಸತೀಶ್ ಚಂದ್ರ ಮಿಶ್ರಾ, ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಬಾಬುಲಾಲ್ ಮರಂಡಿ, ಹೇಮಂತ್ ಸೊರೆನ್ ಮತ್ತು ಜಿತನ್ ರಾಮ್ ಮಂಜಿ ಅಲ್ಲದೆ ಜೆಡಿಯುನ ಶರದ್ ಯಾದವ್ ಮತ್ತು ಆರ್ ಎಲ್ ಡಿಯ ಅಜಿತ್ ಸಿಂಗ್ ಹಾಜರಿದ್ದರು.

ಕಾಂಗ್ರೆಸ್ ನಿಂದ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರು ಮಾತ್ರವಲ್ಲದೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಗುಲಾಮ್ ನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ, ಅಹ್ಮದ್ ಪಟೇಲ್, ಎ.ಕೆ.ಆಂಟನಿ ಮತ್ತು ರಣ್ ದೀಪ್ ಸುರ್ಜೆವಾಲ ಭಾಗವಹಿಸಿದ್ದರು.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುುಪಿಎ ಮೈತ್ರಿಕೂಟದ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಇಂದು ಆಯೋಜಿಸಿದ್ದ ಔತಣಕೂಟ ಅದ್ಭುತವಾಗಿತ್ತು. ವಿವಿಧ ರಾಜಕೀಯ ಪಕ್ಷಗಳ ನಾಯಕರು ಭೇಟಿಯಾಗಿ ಅನೌಪಚಾರಿಕವಾಗಿ ಮಾತುಕತೆ ನಡೆಸಲು, ಸ್ನೇಹ ವಿಸ್ತರಿಸಿಕೊಳ್ಳಲು ಅತ್ಯುತ್ತಮ ವೇದಿಕೆ ಎಂದು ಟ್ವೀಟ್ ಮಾಡಿದ್ದಾರೆ.


ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಇತ್ತೀಚೆಗೆ ಮೋದಿ ಸರ್ಕಾರದಿಂದ ಹೊರಬಂದ ಇಬ್ಬರು ಸಚಿವರ ಆಂಧ್ರ ಪ್ರದೇಶದ ತೆಲುಗು ದೇಶಂ ಪಕ್ಷಕ್ಕೆ , ಬಿಜೆಡಿ, ಟಿಆರ್ ಎಸ್ ಪಕ್ಷಕಗಳಿಗೆ ಆಹ್ವಾನವಿರಲಿಲ್ಲ. ಒಡಿಶಾದಲ್ಲಿ ಬಿಜೆಡಿ ಮತ್ತು ತೆಲಂಗಾಣದಲ್ಲಿ ಟಿಆರ್ ಎಸ್ ಪಕ್ಷಗಳು ಆಳ್ವಿಕೆ ನಡೆಸುತ್ತಿವೆ,.

ಔತಣಕೂಟದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಶರದ್ ಯಾದವ್ ಮತ್ತು ತೇಜಸ್ವಿ ಯಾದವ್, 2019ರ ಲೋಕಸಭೆ ಚುನಾವಣೆಗೆ ವಿಸ್ತಾರ ಮೈತ್ರಿಗೆ ಇದು ಮೊದಲ ಹೆಜ್ಜೆ ಎಂದು ಹೇಳಿದ್ದಾರೆ.

ವಿರೋಧ ಪಕ್ಷಗಳೆಲ್ಲಾ ಸೇರಿ ರಾಹುಲ್ ಗಾಂಧಿಯವರನ್ನು ಮುಂದಿನ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ನೇಮಿಸಲು ಒಪ್ಪಿಗೆ ನಡೆದಿದೆಯೇ ಎಂದು ಕೇಳಿದ್ದಕ್ಕೆ ತೇಜಸ್ವಿ ಯಾದವ್, ಪ್ರಧಾನ ಮಂತ್ರಿ ಅಭ್ಯರ್ಥಿ ಯಾರಾಗಬೇಕೆಂದು ನಿರ್ಧರಿಸುವ ಸಮಯ ಇನ್ನೂ ಬಂದಿಲ್ಲ ಎಂದು ಹೇಳಿದ್ದಾರೆ.


SCROLL FOR NEXT