ಪಂಜಾಬ್: ಗಾಯಕ ದಲೇರ್ ಮೆಹಂದಿ ವಿರುದ್ಧದ ಮಾನವ ಕಳ್ಳಸಾಗಣೆ ಆರೋಪ ಸಾಬೀತಾಗಿದ್ದು, ಅಪರಾಧಿಗೆ 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.
ಇತ್ತೀಚಿನ ವರದಿ ಪ್ರಕಾರ, ಶಿಕ್ಷೆ ಪ್ರಕಟವಾದ ಬೆನ್ನೆಲ್ಲೇ ಗಾಯಕ ದಲೇರ್ ಮೆಹಂದಿ ಗೆ ಜಾಮೀನೂ ಸಹ ಮಂಜೂರಾಗಿದೆ. ಮೆಹಂದಿ ಹಾಗೂ ಆತನ ಸಹೋದರ ಶಂಶೀರ್ ಸಿಂಗ್ ಇಬ್ಬರ ವಿರುದ್ಧವೂ ಮಾನವ ಕಳ್ಳಸಾಗಣೆ ಆರೋಪ ಕೇಳಿಬಂದಿತ್ತು. ಮೆಹಂದಿ ಹಾಗೂ ಆತನ ಸಹೋದರ ವ್ಯಕ್ತಿಗಳನ್ನು ತಮ್ಮ ತಂಡದ ಸದಸ್ಯರ ಮಾರುವೇಷದಲ್ಲಿ ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿತ್ತು.
ಪಂಜಾಬ್ ನ ಪಟಿಯಾಲ ನ್ಯಾಯಾಲಯ ಮೆಹಂದಿ ಹಾಗೂ ಆತನ ಸಹೋದರನನ್ನು ಅಪರಾಧಿಗಳೆಂದು ಘೋಷಿಸಿದ್ದು, 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಪಂಜಾಬ್ ನ ಬಕ್ಷ್ಶಿಶ್ ಸಿಂಗ್ ಎಂಬ ವ್ಯಕ್ತಿಯ ದೂರನ್ನು ಆಧರಿಸಿ 2013 ರಲ್ಲಿ ಪಟಿಯಾಲಾ ಪೊಲೀಸರು ಪ್ರಕರಣ ದಾಖಲಿಸಿದ್ದರು.