ದೇಶ

ನ್ಯಾಯಾಂಗದಲ್ಲಿ ಕೇಂದ್ರದ ಹಸ್ತಕ್ಷೇಪಕ್ಕೆ ನ್ಯಾಯಾಧೀಶ ಚಲಮೇಶ್ವರ್ ಆಕ್ಷೇಪ, ಸಿಜೆಐಗೆ ಪತ್ರ

Lingaraj Badiger
ನವದೆಹಲಿ: ನ್ಯಾಯಾಂಗ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಾಧೀಶ ಜೆ ಚಲಮೇಶ್ವರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಕುರಿತು ಚರ್ಚಿಸಲು ಪೂರ್ಣ ಕೋರ್ಟ್ ರಚಿಸುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಪತ್ರ ಬರೆದಿದ್ದಾರೆ.
ನ್ಯಾ.ಚಲಮೇಶ್ವರ್ ಅವರು ಮಾರ್ಚ್ 21ರಂದು ಮುಖ್ಯ ನ್ಯಾಯಮೂರ್ತಿಗೆ 6 ಪುಟಗಳ ಪತ್ರ ಬರೆದಿದ್ದು, ನ್ಯಾಯಾಂಗ ಮತ್ತು ಸರ್ಕಾರದ ನಡುವೆ ಸ್ನೇಹಬಾಂಧವ್ಯವಿದ್ದರೆ ಪ್ರಜಾತಂತ್ರದ ಮರಣಶಾಸನವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನ್ಯಾ.ಚಲಮೇಶ್ವರ್ ಅವರು ಈ ಪತ್ರವನ್ನು ಸುಪ್ರೀಂ ಕೋರ್ಟ್ ಇತರೆ 22 ನ್ಯಾಯಾಧೀಶರಿಗೂ ಕಳುಹಿಸಿದ್ದು, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ಸೂಚನೆಯಂತೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರು, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೃಷ್ಣ ಭಟ್ ಅವರ ವಿರುದ್ಧ ತನಿಖೆಗೆ ಆದೇಶಿಸಿರುವುದನ್ನು ಪ್ರಶ್ನಿಸಿದ್ದಾರೆ.
ಕರ್ನಾಟಕ ಹೈಕೋರ್ಟ್​ಗೆ ನೇರವಾಗಿ ಪತ್ರ ಬರೆದು ವ್ಯವಹಾರ ನಡೆಸಿದ ಕೇಂದ್ರ ಸರ್ಕಾರದ ಕ್ರಮಂ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ನ್ಯಾ. ಚಲಮೇಶ್ವರ್ ಅವರು, ಸರ್ಕಾರ ಹಾಗೂ ನ್ಯಾಯಾಂಗದ ಮಧ್ಯೆ ಯಾವುದೇ ಸ್ನೇಹಬಾಂಧವ್ಯ ಇದ್ದರೂ ಅದು ಪ್ರಜಾತಂತ್ರದ ಅವನತಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ. 
ನ್ಯಾಯಾಂಗದ ಪರಿಧಿಯಲ್ಲಿ ಸರ್ಕಾರದ ಹಸ್ತಕ್ಷೇಪವಾದ ಪ್ರಕರಣಗಳು ಹಾಗೂ ಕಾರ್ಯಾಂಗದ ಸೂಚನೆಗೆ ಪೂರಕವಾಗಿ ನಡೆದುಕೊಂಡ ಕೆಲ ವಿಶೇಷ ಪ್ರಕರಣಗಳ ವಿಚಾರಣೆಗೆ ದೇಶದ ಮುಖ್ಯನ್ಯಾಯಮುರ್ತಿಗಳು ಒಂದು ಪೂರ್ಣ ಕೋರ್ಟ್ ರಚಿಸಬೇಕೆಂದು ಚಲಮೇಶ್ವರ್ ಅವರು ಒತ್ತಾಯಿಸಿದ್ದಾರೆ.
ಸುಪ್ರೀಂ ಕೋರ್ಟ್ ಕೊಲಿಜಿಯಂನ ಶಿಫಾರಸಿನ ಸಂಬಂಧ ಕರ್ನಾಟಕ ಹೈಕೋರ್ಟ್​ಗೆ ಕೇಂದ್ರ ಕಾನೂನು ಸಚಿವಾಲಯದಿಂದ ನೇರವಾಗಿ ಸಂಪರ್ಕಿಸಿದ ವಿಚಾರವನ್ನು ಪ್ರಸ್ತಾಪಿಸಿದ ನ್ಯಾ. ಚಲಮೇಶ್ವರ್ ಅವರು, ನ್ಯಾಯಾಂಗ ಅಧಿಕಾರಿಯನ್ನು ಹೈಕೋರ್ಟ್ ನ್ಯಾಯಾಧೀಶರಾಗಿ​ ಆಗಿ ನೇಮಕ ಮಾಡಬೇಕಿತ್ತು. ಅಥವಾ ಆ ವಿಚಾರದಲ್ಲಿ ಭಿನ್ನಾಭಿಪ್ರಾಯವಿದ್ದಿದ್ದರೆ ಕೊಲಿಜಿಯಂಗೆ ವಾಪಸ್ ತಿಳಿಸಬಹುದಾಗಿತ್ತು. ಅದು ಬಿಟ್ಟು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ನೇರವಾಗಿ ಪತ್ರ ಬರೆದು ಆ ನ್ಯಾಯಾಂಗ ಅಧಿಕಾರಿಯ ವಿರುದ್ಧ ಮರುತನಿಖೆ ನಡೆಸಬೇಕೆಂದು ಸೂಚಿಸುತ್ತಾರೆ. ಇದಕ್ಕೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸಮ್ಮತಿಸುತ್ತಾರೆ. ಈ ಬೆಳವಣಿಗೆಯು ಹಿಂದಿನ ತನಿಖೆಯ ವರದಿಗೆ ತದ್ವಿರುದ್ಧವಾದಂತಾಗಿದೆ. ಅಷ್ಟೇ ಅಲ್ಲ, ಕೊಲಿಜಿಯಿಂನ ಶಿಫಾರಸಿಗೂ ತಡೆ ಬಿದ್ದಂತಾಗಿದೆ. ಹಿಂದಿನ ತನಿಖೆಯಲ್ಲಿ ಆ ಅಧಿಕಾರಿಗೆ ಕ್ಲೀನ್ ಚಿಟ್ ಕೊಡಲಾಗಿತ್ತು. ಅದನ್ನು ಬದಿಗೊತ್ತಿ, ಆ ಅಧಿಕಾರಿ ವಿರುದ್ಧ ಮರುತನಿಖೆಗೆ ಸೂಚಿಸಿದ್ದು ನ್ಯಾಯಾಂಗ ವ್ಯವಸ್ಥೆಯಲ್ಲಿ ಸರ್ಕಾರದ ಹಸ್ತಕ್ಷೇಪವಾದಂತಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
SCROLL FOR NEXT