ಉತ್ತರ ಭಾರತದಲ್ಲಿ ಇದ್ದಕ್ಕಿದ್ದಂತೆ ಎದ್ದ ಧೂಳು ಬಿರುಗಾಳಿ: ಸಾವಿನ ಸಂಖ್ಯೆ 108ಕ್ಕೆ ಏರಿಕೆ
ಲಖನೌ: ಉತ್ತರಪ್ರದೇಶ ಹಾಗೂ ರಾಜಸ್ತಾನದಲ್ಲಿ ಇದ್ದಕ್ಕಿದ್ದಂತೆ ಎದ್ದ ಧೂಳಿನ ಬಿರುಗಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 108ಕ್ಕೆ ಏರಿಕೆಯಾಗಿದ್ದು, 183ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಧೂಳಿನ ಚಕ್ರವಾತದ ಬಳಿಕ ಸುರಿದ ಭಾರಿ ಮಳೆಯಿಂದ ಹಲವೆಡೆ ಅಪಾರ ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಗಿದೆ. ಬುಧವಾರ ತಡರಾತ್ರಿಯ ನಂತರ ಉತ್ತರಪ್ರದೇಶ 17 ಜಿಲ್ಲೆಗಳಲ್ಲಿ ಹಾಗೂ ರಾಜಸ್ತಾನದ 3 ಜಿಲ್ಲೆಗಳಲ್ಲಿ ದಿಢೀರನೆ 100 ಕಿ.ಮೀ ವೇಗದಲ್ಲಿ ಧೂಳಿನ ಚಕ್ರವಾತ ಎದ್ದಿದೆ.
ಈ ಗಾಳಿ ರಾತ್ಯಿಯುದ್ದಕ್ಕೂ ಬೀಸಿದ್ದು, ನಂತರ ಬೆಳಗಿನ ಜಾವದಲ್ಲಿ ಭಾರಿ ಗುಡುಗು ಮಳೆ ಸುರಿದಿದೆ. ಧೂಳುಗಾಲಿ ಹಾಗೂ ಮಳೆಯಿಂದಾಗಿ ಉತ್ತರಪ್ರದೇಶದಲ್ಲಿ 70 ಮಂದಿ ಹಾಗೂ ರಾಜಸ್ತಾನದಲ್ಲಿ 36 ಮಂದಿ ಸಾವನ್ನಪ್ಪಿದ್ದಾರೆ.
ಗಾಯಗೊಂಡವರ ಸಂಖ್ಯೆ ಉತ್ತರಪ್ರದೇಶದಲ್ಲಿ 47 ಹಾಗೂ ರಾಜಸ್ತಾನದಲ್ಲಿ 100ಕ್ಕೂ ಹೆಚ್ಚು ಎಂದು ಹೇಳಲಾಗುತ್ತಿದೆ. ಸುಮಾರು 45 ನಿಮಿಷಗಳ ಕಾಲ ಬೀಸಿದ ಬಿರುಗಾಳಿಗೆ ಮನೆಗಳು ಉರುಳಿಬಿದ್ದಿವೆ. ಮರಗಳೆಲ್ಲಾ ನೆಲಕ್ಕುರುಳಿವೆ. ಭಾರಿ ಪ್ರಮಾಣದಲ್ಲಿ ಫಸಲು ನೆಲಕಚ್ಚಿದೆ.
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿದ್ದ ಸಂದರ್ಭದಲ್ಲಿಯೇ ಈ ಅವಘಡ ಸಂಭವಿಸಿದೆ. ರಾಜ್ಯದಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾಗೂ ಸಾವುನೋವುಗಳು ಸಂಭವಿಸಿದ್ದರೂ, ಮುಖ್ಯಮಂತ್ರಿಗಳು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆಂದು ಈ ನಡುವೆ ವಿಪಕ್ಷಗಳು ಟೀಕೆ ಮಾಡುತ್ತಿವೆ.
ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಭಯ ರಾಜ್ಯಗಳಲ್ಲಿ ಸಂಭವಿಸಿದ ಧೂಳಿನ ಬಿರುಗಾಳಿ ಹಾಗೂ ಸಾವಿನ ಬಗ್ಗೆ ತೀವ್ರ ಸಂತಾಪ ಸೂಚಿಸಿದ್ದು, ಕೇಂದ್ರ ಸರ್ಕಾರದಿಂದ ಎರಡೂ ರಾಜ್ಯಗಳಿಗೆ ಅಗತ್ಯವಿರುವ ಎಲ್ಲಾ ನೆರವುಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕರ್ನಾಟಕದಲ್ಲಿರುವ ಯೋಗಿ ಆದಿತ್ಯನಾಥ್ ಅವರು ತಮ್ಮ ರಾಜ್ಯದ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಪರಿಹಾರ ಕಾರ್ಯದಲ್ಲಿ ಯಾವುದೇ ಲೋಪವಾದರೂ ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಉತ್ತರಪ್ರದೇಶ ರಾಜ್ಯದ ಕಂದಾಯ ಹಾಗೂ ಪರಿಹಾರ ಆಯುಕ್ತ ಸಂಜಯ್ ಶರ್ಮಾ ಅವರು ಮಾತನಾಡಿ, ದುರ್ಘಟನೆಯಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ರೂ.4 ಲಕ್ಷ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದ್ದು, ಗಾಯಾಳುಗಳಿಗೆ ರೂ.13,000 ಪರಿಹಾರದ ಜೊತೆಗೆ ಚಿಕಿತ್ಸೆಯ ವೆಚ್ಚಗಳನ್ನು ಭರಿಸಲು ನಿರ್ಧರಿಸಿದೆ. ಶೀಘ್ರಗತಿಯಲ್ಲಿ ಪರಿಹಾರ ಧನ ಜನರಿಗೆ ತಲುಪಲು ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ನಡುವೆ ಹೇಳಿಗೆ ನೀಡಿರುವ ಹವಾಮಾನ ಇಲಾಖೆ ಹೆಚ್ಚುವರಿ ನಿರ್ದೇಶಕ ಮೃತ್ಯುಂಜಯ ಮೊಹಪಾತ್ರ ಅವರು, ಹರಿಯಾಣ ರಾಜ್ಯದಲ್ಲಿ ಸೈಕ್ಲೋನ್ ಆಗಿದ್ದು, ಇದರ ಪರಿಣಾಮ ಧೂಳಿನ ಬಿರುಗಾಳಿ ಎದ್ದಿದೆ. ಮುಂದಿನ 48 ಗಂಟೆಗಳಲ್ಲಿ ಮತ್ತೆ ಬಿರುಗಾಳಿ ಏಳುವ ಸಂಭವವಿದೆ ಎಂದು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos