ರಾಂಚಿ: 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಆಕೆಯ ಕುಟುಂಬ ಸದಸ್ಯರ ಎದುರೇ ಬಾಲಕಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ದಾರುಣ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.
ಛಾತ್ರಾ ಜಿಲ್ಲೆಯ ರಾಜಾತೆಂಡುಹ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಾಲಕಿಯ ಕುಟುಂಬ ಸದಸ್ಯರು ಮದುವೆಗೆಂದು ಬೇರೆ ಊರಿಗೆ ಹೋಗಿದ್ದರು. ಈ ಸಂದರ್ಭ ದುಷ್ಕರ್ಮಿಗಳು ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ಇಂದು ಬಾಲಕಿಯ ತಂದೆ ವಿಷಯವನ್ನು ಗ್ರಾಮದ ಹಿರಿಯರಿಗೆ ತಿಳಿಸಿದ್ದರು. ಪಂಚಾಯಿತಿ ಸೇರಿದ ಗ್ರಾಮಸ್ಥರು ಅತ್ಯಾಚಾರ ಎಸಗಿದ ನಾಲ್ವರು ದುಷ್ಕರ್ಮಿಗಳಿಗೆ 100 ಸಲ ಬಸ್ಕಿ ತೆಗೆಯುವ ಮತ್ತು ಬಾಲಕಿಯ ಪೋಷಕರಿಗೆ 50 ಸಾವಿರ ರುಪಾಯಿ ದಂಡ ಕಟ್ಟಿ ರಾಜಿ ಮಾಡಿಕೊಳ್ಳಬೇಕು ಎಂದು ಶಿಕ್ಷೆ ವಿಧಿಸಿತ್ತು ಎಂದು ಎನ್ ಡಿಟಿವಿ ವರದಿ ಮಾಡಿದೆ.
ಪಂಚಾಯಿತಿ ಆದೇಶದಿಂದ ಕೆರಳಿದ ಯುವಕರು ಬಾಲಕಿಯ ಮನೆಗೆ ನುಗ್ಗಿ ಎಲ್ಲರನ್ನೂ ಥಳಿಸಿದರು. ಬಳಿಕ ಬಾಲಕಿಯನ್ನು ಹೊರಗೆಳೆದು ಜೀವಂತ ಸುಟ್ಟು ಹಾಕಿದರು ಎಂದು ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.
ನಾಲ್ವರು ಆರೋಪಿಗಳ ಹೆಸರನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.