ನವದೆಹಲಿ: ಕರ್ನಾಟಕದಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದೆ. ಆದರೂ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಸಾಧ್ಯವಿರುವ ಎಲ್ಲಾ ಕೊಳಕು ತಂತ್ರಗಳನ್ನು ಬಳಸಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕಾಂಗ್ರೆಸ್ ವಿರುದ್ಧ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಹಿನ್ನೆಲೆಯಲ್ಲಿ ಇಂದು ದೆಹಲಿಯ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, 122 ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ 78ಕ್ಕೆ ಕುಸಿದಿದೆ. ಇದು ಕಾಂಗ್ರೆಸ್ ಪಕ್ಷದ ದಯನೀಯ ಸೋಲಾಗಿದೆ. ಆದರೂ ಅಧಿಕಾರ ಹಿಡಿಯಲು ಹಿಂಬಾಗಿಲಿನಿಂದ ಪ್ರಯತ್ನ ನಡೆಸುತ್ತಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ಸಾಮಾನ್ಯ ಕಾರ್ಯಕರ್ತರಂತೆ ಇಡೀ ರಾಜ್ಯದಲ್ಲಿ ಓಡಾಡಿ ಪ್ರಚಾರ ನಡೆಸಿರುವುದು ಅಭಿನಂದನಾರ್ಹ. ಇದರ ಪರಿಣಾಮವಾಗಿಯೇ ಬಿಜೆಪಿ 104 ಸ್ಥಾನಗಳನ್ನು ಪಡೆದಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಚುನಾವಣೆ ವೇಳೆ ಕಾಂಗ್ರೆಸ್ ಹಣ, ಅಧಿಕಾರ ಬಳಸಿ ಎಲ್ಲಾ ರೀತಿಯ ಗಿಮಿಕ್ ಮಾಡಿದರು ಸಹ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಕಡೆ 35 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ ಮತ್ತು ಮತ್ತೊಂದು ಕಡೆ ಕೇವಲ 1 ಸವಾರಿ ಮತಗಳ ಅಂತರಿಂದ ಗೆಲುವು ಸಾಧಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಳಿಕ ಮಾತನಾಡಿದ ಪ್ರಧಾನಿ ಮೋದಿ ಅವರು, ಒಂದು ಕಡೆ ಕರ್ನಾಟಕ ಚುನಾವಣೆ ಗೆಲುವಿನ ಖುಷಿಯಾದರೆ ಮತ್ತೊಂದೆಡೆ ನನ್ನ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ಫ್ಲೈ ಓವರ್ ಕುಸಿದು ಹಲವು ಮೃತಪಟ್ಟಿರುವ ದುಃಖ ಇದೆ ಎಂದರು.
ಬಿಜೆಪಿ ಉತ್ತರ ಭಾರತದ ಪಕ್ಷ ಎನ್ನುವವರಿಗೆ ಕರ್ನಾಟಕ ಚುನಾವಣೆ ತಕ್ಕ ಉತ್ತರ ನೀಡಿದೆ. ನನಗೆ ಕನ್ನಡ ಬರುವುದಿಲ್ಲ ಎಂದು ಹೇಳುವ ಮೂಲಕ ಭಾಷೆಯ ಆಧಾರದ ಮೇಲೆ ಕಾಂಗ್ರೆಸ್ ಒಡೆದು ಆಳುವ ತಂತ್ರ ಅನುಸರಿಸಿತು ಎಂದು ಆರೋಪಿಸಿದರು.