ದೇಶ

ಸುಪ್ರೀಂ ಕೋರ್ಟ್ ಗೆ ನನ್ನ ಸೆಲ್ಯೂಟ್, ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚನೆ ಶತಃಸಿದ್ಧ: ಪಿ ಚಿದಂಬರಂ

Srinivasamurthy VN
ನವದೆಹಲಿ: ಪ್ರಜಾಪ್ರಭುತ್ವ ರಕ್ಷಣೆಗೆ ನಿಂತ ಸುಪ್ರೀಂ ಕೋರ್ಟ್ ಗೆ ನನ್ನ ಸೆಲ್ಯೂಟ್...ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಶತಃ ಸಿದ್ಧ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಚಿದಂಬರಂ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಿಜೆಪಿಯ ಕುದುರೆ ವ್ಯಾಪರಕ್ಕೆ ಬಗ್ಗದೇ ತಮ್ಮ ತಮ್ಮ ಪಕ್ಷಗಳ ಪರ ನಿಂತಿದ್ದಾರೆ, ಆ ಮೂಲಕ ಪ್ರಜೆಗಳ ಆದೇಶವನ್ನು ಎತ್ತಿ ಹಿಡಿದಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ ವಿಶ್ವಾಸ ಮತ ಪ್ರಕ್ರಿಯೆ ಕೇವಲ ಯಾವ ಪಕ್ಷ ಸರ್ಕಾರ ರಚನೆ ಮಾಡುತ್ತದೆ ಎಂಬುದರ ಕುರಿತು ಮಾತ್ರವಲ್ಲ. ಬದಲಿಗೆ ಯಾವ ಶಾಸಕರು ಪ್ರಜೆಗಳ ಆದೇಶಕ್ಕೆ ಮನ್ನಣೆ ನೀಡುತ್ತಿದ್ದಾರೆ. ಪ್ರಜಾಪ್ರಭುತ್ವ ಮತ್ತು ತಮ್ಮ ಆರಿಸಿದ ಮತದಾರನಿಗೆ ಎಷ್ಟು ನಿಯತ್ತಾಗಿದ್ದಾರೆ ಎಂಬ ವಿಚಾರದ ಸ್ಪಷ್ಟನೆ ಎಂದು ಚಿದಂಬರಂ ವಿಶ್ಲೇಷಿಸಿದ್ದಾರೆ.
ವಿಶ್ವಾಸಮತವನ್ನು ವಿಳಂಬ ಮಾಡುವ ಮತ್ತು ತಂತ್ರಗಾರಿಕೆ ಮೂಲಕ ಶಾಸಕರ ಖರೀದಿಗೆ ಬಿಜೆಪಿ ಮಾಡುತ್ತಿರುವ ಪ್ರಯತ್ನಗಳಿಗೆ ಕಾಂಗ್ರೆಸ್ ಜೆಡಿಎಸ್ ಶಾಸಕರು ತಣ್ಣೀರೆರಚಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಗೆ ನನ್ನ ಸೆಲ್ಯೂಟ್
ಪ್ರಜಾಪ್ರಭುತ್ವ ರಕ್ಷಣೆಗೆ ನಿಂತ ಸುಪ್ರೀಂ ಕೋರ್ಟ್ ಗೆ ನನ್ನ ಸೆಲ್ಯೂಟ್ ಎಂದು ಹೇಳಿದ ಪಿ ಚಿದಂಬರಂ ಅವರು, ವಿಶ್ವಾಸಮತ ಯಾಚನೆಯನ್ನು ನೇರ ಪ್ರಸಾರ ಮಾಡುವಂತೆ ಆದೇಶ ಮಾಡುವ ಮೂಲಕ ಕಲಾಪದ ಪ್ರತೀ ಕ್ಷಣವನ್ನೂ ಮತದಾರ ವೀಕ್ಷಿಸುವಂತೆ ಮಾಡಿದೆ. ಆ ಮೂಲಕ ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿ ಹಿಡಿದಿದೆ. ಅಲ್ಲದೆ ಬಿಜೆಪಿಯ ಹಂಗಾಮಿ ಸ್ಪೀಕರ್ ಅವರ ಕಾರ್ಯವೈಖರಿಯನ್ನೂ ಜನತೆ ನೋಡುವಂತಾಗಲಿದೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
SCROLL FOR NEXT