ಹೊಸ ಬೀಟಾ ಆವೃತ್ತಿಯ ಐಎರ್ ಸಿಟಿಸಿ ವೆಬ್ ಸೈಟ್
ನವದೆಹಲಿ: ಭಾರತೀಯ ರೈಲ್ವೇಯ ಐಆರ್ ಸಿಟಿಸಿ ವೆಬ್‍ಸೈಟ್ ಅಪ್‍ಡೇಟ್ ಆಗಿದ್ದು, ಗ್ರಾಹಕರು ಇನ್ನು ರೈಲು ಟಿಕೆಟ್ ಬುಕ್ಕಿಂಗ್ ಇನ್ನೂ ಸುಲಭವಾಗಿ ಮಾಡಬಹುದಾಗಿದೆ.
ಈ ಹಿಂದಿನ ಹಳೆಯ ವೆಬ್ ಸೈಟಿನಲ್ಲಿದ್ದ ತಾಂತ್ರಿಕ ದೋಷ ಮತ್ತು ನ್ಯೂನ್ಯತೆಗಳನ್ನು ಹಾಲಿ ಹೊಸ ವೆಬ್ ಸೈಟ್ ಬಹುತೇಕ ಪರಿಷ್ಕರಿಸಿಕೊಂಡಿದ್ದು, ಇನ್ನೂ ವೇಗವಾಗಿ ಮತ್ತು ಇನ್ನೂ ಸುಲಭವಾಗಿ ಪ್ರಯಾಣಿಕರು ಐಆರ್ ಸಿಟಿಸಿ ವೆಬ್ ಸೈಟ್ ಅನ್ನು ಬಳಕೆ ಮಾಡಬಹುದಾಗಿದೆ. ಮುಂದಿನ ತಲೆಮಾರಿನ ಇ-ಟಿಕೆಟ್ ದೃಷ್ಟಿಕೋನದಲ್ಲಿ ಈ ಹೊಸ ಬೀಟಾ ಆವೃತ್ತಿಯ ವೆಬ್ ಸೈಟ್ ರಚನೆ ಮಾಡಲಾಗಿದೆ.
ಪ್ರಸ್ತುತ ಭಾರತೀಯ ರೈಲ್ವೇ ಇಲಾಖೆ ಅಳವಡಿಸಿಕೊಂಡಿರುವ ಬೀಟಾ ಆವೃತ್ತಿಯ ಪರಿಷ್ಕೃತಗೊಂಡ ವೆಬ್‍ಸೈಟ್ (www.irctc.co.in) ನಲ್ಲಿ ಯಾವುದೇ ರೀತಿ ಅಡೆ ತಡೆಗಳಿಲ್ಲದೆ ಬೇಗ ಟಿಕೆಟ್ ಅನ್ನು ಕಾಯ್ದಿರಿಸಬಹುದಾಗಿದೆ. ಹೊಸ ವೆಬ್‍ಸೈಟ್ ಎಲ್ಲಾ ಫ್ಲಾಟ್‍ಫಾರಂ ಗಳ ಡಿವೈಸ್ ಗಳಲ್ಲೂ ಕೆಲಸ ಮಾಡಲಿದೆ. ಉದಾಹರಣೆಗೆ ಮೊಬೈಲ್, ಡೆಸ್ಕ್ ಟಾಪ್, ಲ್ಯಾಪ್ ಟಾಪ್ ಮತ್ತು ಟ್ಯಾಬ್ಲೆಟ್ ಸೇರಿದಂತೆ ಎಲ್ಲ ರೀತಿಯ ಸ್ಮಾರ್ಟ್ ಗ್ಯಾಜೆಟ್ ಗಳಲ್ಲಿ ಸುಲಭವಾಗಿ ಕೆಲಸ ಮಾಡಬಹುದು ಎಂದು ಇಲಾಖೆ ಹೇಳಿದೆ.
ಹೊಸ ಇ-ಟಿಕೆಟ್ ವೈಬ್ ಸೈಟಿನಲ್ಲಿ ರೈಲುಗಳ ಆಗಮನ ಅಥವಾ ನಿರ್ಗಮನ, ಸೀಟುಗಳ ಲಭ್ಯತೆ ಕುರಿತಂತೆ ವಿಚಾರಣೆ ಮಾಡಲು ಲಾಗಿನ್ ಆಗುವ ಅವಶ್ಯಕತೆ ಇಲ್ಲ. ನೇರವಾಗಿ ವೆಬ್ ಸೈಟಿನ ಸಂಬಂಧ ವಿಭಾಗದಲ್ಲಿ ಈ ಬಗ್ಗೆ ವಿಚಾರಣೆ ಮಾಡಬಹುದು. ಅಂತೆಯೇ ರೈಲು ಗಳು ಹೊರಡುವ, ಬರುವ ಸಮಯ, ದಿನಾಂಕ, ಕ್ಲಾಸ್, ಕೋಟಾ ಗಳ ಆಧಾರದಲ್ಲಿ ರೈಲು ಸೀಟ್ ಗಳ ಲಭ್ಯತೆ ತಿಳಿಯಬಹುದಾಗಿದೆ.
ಇನ್ನು ವೇಟಿಂಗ್ ಲಿಸ್ಟ್ ನಲ್ಲಿರುವವರಿಗೆ ಧೃಢೀಕರಣದ ಸಾಧ್ಯತೆಗಳನ್ನು ತಿಳಿಸುವ ವ್ಯವಸ್ಥೆ ಇದ್ದು, ಗ್ರಾಹಕರು ಸೀಟ್ ಕ್ಯಾನ್ಸಲ್ ಮಾಡಲು, ಟಿಕೆಟ್ ಪ್ರಿಂಟ್ ಮಾಡಲು, ಎಸ್‍ಎಮ್‍ಎಸ್ ಕಳುಹಿಸಿಕೊಳ್ಳಲು ಕೂಡ ಆಯ್ಕೆ ಕಲ್ಪಿಸಲಾಗಿದೆ. ಅಷ್ಟು ಮಾತ್ರವಲ್ಲದೇ ಬುಕ್ ಮಾಡಿದ ಸಮಯದಲ್ಲಿ ಪ್ರಯಾಣ ಮಾಡಲು ಸಾಧ್ಯವಿಲ್ಲದಿದ್ದರೆ ಆ ಟಿಕೆಟ್ ದರದಲ್ಲಿ ಬೇರೆ ಸಮಯದಲ್ಲಿ ಆ ಸ್ಥಳಕ್ಕೆ ಹೋಗುವ ರೈಲಿನಲ್ಲಿ ಲಭ್ಯತೆ ಇದ್ದಲ್ಲಿ ಟಿಕೆಟ್ ಬುಕ್ ಮಾಡಲು ಕೂಡ ಅವಕಾಶವಿದೆ. ಟಿಕಟ್ ಕಾಯ್ದಿರಿಸುವ ವೇಳೆ ಗ್ರಾಹಕ ಕಾರ್ಡ್ ಮಾಹಿತಿಯನ್ನು ಬಳಸುವುದರಿಂದ ಕಾಯ್ದಿರಿಸುವ ಸಮಯ ಕೊಂಚ ಕಡಿಮೆಯಾಗಲಿದೆ. ಅಂತೆಯೇ ಹಣ ಪಾವತಿಸಲು 6 ಆದ್ಯತಾ ಬ್ಯಾಂಕ್ ಗಳನ್ನು ನಮೂದಿಸಲೂ ಅವಕಾಶ ನೀಡಲಾಗಿದೆ.
ಹಳೆಯ ವೆಬ್ ಸೈಟ್ ಕೂಡ ಕಾರ್ಯಾಚರಣೆಯಲ್ಲಿದ್ದು, ಹಳೆಯ ವೆಬ್ ಸೈಟಿಗೆ ಭೇಟಿ ನೀಡುವ ಗ್ರಾಹಕರಿಗೆ ಬೀಟಾ ಆವೃತ್ತಿ ಬಳಕೆ ಮಾಡಲು ಮನವಿ ಮಾಡಲಾಗುತ್ತಿದೆ. ಅಂತೆಯೇ ವೆಬ್ ಸೈಟ್ ಕುರಿತಂತೆ ಅಭಿಪ್ರಾಯ ಮತ್ತು ಸಲಹೆ ನೀಡಲೂ ಗ್ರಾಹಕರಿಗೆ ಮನವಿ ಮಾಡಲಾಗುತ್ತಿದೆ. 15 ದಿನಗಳ ಗ್ರಾಹಕರ ಬಳಕೆ ಆಧರಿಸಿ ಈ ಬೀಟಾ ಆವೃತ್ತಿಯ ವೆಬ್ ಸೈಟ್ ನಲ್ಲಿ ಮಾಡಬಹುದಾದ ಬದಲಾವಣೆಗಳ ಕುರಿತು ಗ್ರಾಹಕರಿಂದಲೇ ಮಾಹಿತಿ ಕಲೆಹಾಕಲು ರೈಲ್ವೇ ಇಲಾಖೆ ನಿರ್ಧರಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos