ಬಿಜೆಪಿ ಮುಖಂಡರ ಕಗ್ಗೊಲೆ: ಕಾಶ್ಮೀರದಾದ್ಯಂತ ಸೇನೆ ತೀವ್ರ ಕಟ್ಟೆಚ್ಚರ
ಅಪರಿಚಿತ ಬಂದೂಕುದಾರಿಗಳು ಬಿಜೆಪಿ ಮುಖಂಡರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ ಬೆನ್ನಲ್ಲೇ ಇಡೀ ಜಮ್ಮು ಮತ್ತು ಕಾಶ್ಮೀರ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಭಾರತೀಯ ಸೇನೆ ಮತ್ತು ಸ್ಥಳೀಯ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.
ಶ್ರೀನಗರ: ಕಣಿವೆ ರಾಜ್ಯ ಕಾಶ್ಮೀರದ ಕಿಶ್ತ್ ವಾರ್ ನಲ್ಲಿ ಅಪರಿಚಿತ ಬಂದೂಕುದಾರಿಗಳು ಬಿಜೆಪಿ ಮುಖಂಡರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ ಬೆನ್ನಲ್ಲೇ ಇಡೀ ಜಮ್ಮು ಮತ್ತು ಕಾಶ್ಮೀರ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಭಾರತೀಯ ಸೇನೆ ಮತ್ತು ಸ್ಥಳೀಯ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.
ಕಾಶ್ಮೀರದ ಕಿಶ್ತ್ ವಾರ್ ನಲ್ಲಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಅನಿಲ್ ಪರಿಹರ್ ಹಾಗೂ ಅವರ ಸಹೋದರ ಅಜಿತ್ ತಮ್ಮ ಸ್ಟೇಷನರಿ ಅಂಗಡಿ ಮುಚ್ಚಿ ಮನೆಗೆ ವಾಪಾಸಾಗುತ್ತಿದ್ದಾಗ ಅಪರಿಚಿತ ಬಂದೂಕುಧಾರಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಸಾವನ್ನಪ್ಪಿದ್ದಾರೆ.
ಈ ಘಟನೆ ಬೆನ್ನಲ್ಲೇ ಕಾಶ್ಮೀರದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಗುಂಡಿನ ದಾಳಿ ನಡೆಸಿದ ಬಂಧೂಕುಧಾರಿಗಳು ದುಷ್ಕರ್ಮಿಗಳೋ ಅಥವಾ ಉಗ್ರರೋ ಎಂಬುದು ಪೊಲೀಸರಿಗೆ ತಲೆನೋವಾಗಿರುವ ಪ್ರಶ್ನೆಯಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆಯಾದರೂ, ಕಣಿವೆ ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಪ್ರಮುಖವಾಗಿ ಘಟನೆ ನಡೆದ ಕಿಶ್ತ್ ವಾರ್ ನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಅಂತೆಯೇ ಚೆನಾಬ್ ಪ್ರಾಂತ್ಯದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಇನ್ನು ಕಾಶ್ಮೀರದಲ್ಲಿ ರಾಜಕೀಯ ಮುಖಂಡರನ್ನು ಗುರಿಯಾಗಿಸಿಕೊಂಡು ನಡೆಸಲಾದ ಮೊದಲ ದಾಳಿ ಇದಾಗಿದೆ.