ಮುಖ್ಯಮಂತ್ರಿ ಪದವಿಯನ್ನು ನಮ್ಮ ಪಕ್ಷದ ನಾಯಕರಿಗೆ ನೀಡಿ: ಬಿಜೆಪಿಗೆ ಮಿತ್ರ ಪಕ್ಷ
ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ಬಹುಮತ ಸಾಬೀತು ಪಡಿಸಲು ಕೂಡಲೇ ವಿಶೇಷ ಅಧಿವೇಶನ ಕರೆಯುವಂತೆ ರಾಜ್ಯಪಾಲರಿಗೆ ಕಾಂಗ್ರೆಸ್ ಮನವಿ ಮಾಡ್ತುತಿರುವುದು ಒಂದೆಡೆಯಾದರೆ, ಬಿಜೆಪಿ ಮಿತ್ರಪಕ್ಷಗಳೇ ಈಗ ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿವೆ.
ಮನೋಹರ್ ಪರಿಕ್ಕರ್ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಅವರನ್ನು ಮುಕ್ತಗೊಳಿಸಿ, ಆ ಹುದ್ದೆಗೆ ತಮ್ಮದೇ ಪಕ್ಷದ ನಾಯಕರನ್ನು ನೇಮಕ ಮಾಡಬೇಕೆಂದು ಬಿಜೆಪಿ ಮಿತ್ರ ಪಕ್ಷ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ ಬೇಡಿಕೆ ಇಟ್ಟಿದೆ.
ಈಗಾಗಲೇ ಮನೋಹರ್ ಪರಿಕ್ಕರ್ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಸುದಿನ್ ಧಾವಳೀಕರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಗೋಮಾಂತಕ್ ಪಕ್ಷ ಒತ್ತಾಯಿಸಿದೆ. ಮುಖ್ಯಮಂತ್ರಿಗಳ ಹುದ್ದೆ ಪಕ್ಷಕ್ಕೆ ಸಿಗದೇ ಇದ್ದರೆ ಲೋಕಸಭಾ ಚುನಾವಣೆ, ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಜೊತೆ ಸ್ಪರ್ಧಿಸದೇ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಗೋಮಾಂತಕ್ ಪಕ್ಷ ಎಚ್ಚರಿಕೆ ನೀಡಿದೆ.