ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಸಂಪುಟ ಸಹೋದ್ಯೋಗಿ, ಕಾರ್ಯಕರ್ತರ ವಿರುದ್ಧ ಹಲ್ಲೆ ಆರೋಪ ಮಾಡಿದ್ದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ.
ಮೂಲಗಳ ಪ್ರಕಾರ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಅಂಶು ಪ್ರಕಾಶ್ ಅವರನ್ನು ದೂರ ಸಂಪರ್ಕ ಇಲಾಖೆಗೆ ವರ್ಗಾವಣೆ ಮಾಡಲಾಗಿದ್ದು, ಇನ್ನು ಕೇಜ್ರಿವಾಲ್ ನೇತೃತ್ವದ ಸರ್ಕಾರದ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಮುಖ್ಯ ಕಾರ್ಯದರ್ಶಿ ವರ್ಗಾವಣೆ ಮೂಲಕ ಸಿಎಂ ಕೇಜ್ರಿವಾಲ್ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿವೆ.
ಕಳೆದ ಫೆಬ್ರವರಿ 19ರ ಮಧ್ಯ ರಾತ್ರಿ ಕೇಜ್ರಿವಾಲ್ ನಿವಾಸಕ್ಕೆ ವಿಶೇಷ ಸಭೆ ಹಿನ್ನೆಲೆ ತೆರಳಿದ್ದ ವೇಳೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿ ಹಲವು ಆಪ್ ನಾಯಕರು ಹಲ್ಲೆ ನಡೆಸಿದ್ದರೆಂದು ಅಂಶು ಪ್ರಕಾಶ್ ಆರೋಪಿಸಿದ್ದರು. ಬಳಿಕ ಮರುದಿನ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆಪ್ ಮುಖಂಡ ಅಮಾನಾತುಉಲ್ಲಾ, ಪ್ರಕಾಶ್ ಜರ್ವಾಲ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಬಳಿಕ ಮುಖ್ಯಮಂತ್ರಿ ಕೇಜ್ರಿವಾಲ್ ಹಾಗೂ 13 ಶಾಸಕರು ಜಾಮೀನು ಪಡೆದಿದ್ದರು. ಈ ಘಟನೆ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.