ಎಲ್ಗಾರ್ ಪರಿಷದ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಡೆಯುತ್ತಿರುವ ತನಿಖೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಕಾಂಗ್ರೆಸ್ ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರ ದೂರವಾಣಿ ಸಂಖ್ಯೆ ಪೊಲೀಸ್ ಜಾರ್ಜ್ ಶೀಟ್ ನಲ್ಲಿ ದಾಖಲಾಗಿದೆ.
ನಕ್ಸಲರೊಂದಿಗೆ ನಂಟು ಹೊಂದಿರುವ ಆರೋಪದಡಿ ಈಗಾಗಲೇ 10 ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಪುಣೆ ಪೊಲೀಸರು ಈ ಕುರಿತ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪುಣೆ ಪೊಲೀಸರು ದೇಶದ ವಿವಿಧ ಭಾಗಗಳಲ್ಲಿ ನಡೆಸಿದ್ದ ದಾಳಿಯ ವೇಳೆ ಸಿಕ್ಕಿರುವ ಪತ್ರದಲ್ಲಿ ಕಾಮ್ರೆಡ್ ಪ್ರಕಾಶ್ ಎಂಬುವವರು ಸುರೇಂದ್ರ ಎಂಬ ವ್ಯಕ್ತಿಗೆ ಬರೆದಿರುವ ಪತ್ರದಲ್ಲಿ ದಿಗ್ವಿಜಯ್ ಸಿಂಗ್ ಅವರ ದೂರವಾಣಿ ಸಂಖ್ಯೆಯನ್ನು ಉಲ್ಲೇಖಿಸಲಾಗಿದೆ.
ಸೆ.25, 2017 ದಿನಾಂಕದ ಪತ್ರದಲ್ಲಿ ಈ ರೀತಿ ಬರೆಯಲಾಗಿದೆ: "ದೇಶಾದ್ಯಂತ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಂಡು ನಾವು ಪ್ರತಿಭಟನೆಗಳನ್ನು ತೀವ್ರಗೊಳಿಸಬೇಕು, ಸರ್ಕಾರಿ ಪಡೆಗಳು ಎಂದಿಗೂ ವಿದ್ಯಾರ್ಥಿಗಳೆಡೆಗೆ ಮೃದು ಧೋರಣೆ ಹೊಂದಿರುತ್ತವೆ, ಇದೇ ಮುಂದೆ ನಮ್ಮ ವಿರುದ್ಧ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಸರ್ಕಾರವನ್ನು ಅನನುಕೂಲ ಪರಿಸ್ಥಿತಿ ಎದುರಿಸುವಂತೆ ಮಾಡುತ್ತದೆ. ಈ ರೀತಿ ಪ್ರತಿಭಟನೆಗಳನ್ನು ನಡೆಸುವುದಕ್ಕೆ ಸಹಕರಿಸಲು ಕಾಂಗ್ರೆಸ್ ನಾಯಕರು ಬಯಸುತ್ತಿದ್ದಾರೆ, ಅಷ್ಟೇ ಅಲ್ಲದೇ ನಮ್ಮ ಪ್ರತಿಭಟನೆಗಳಿಗೆ ಹಣದ ಸಹಾಯವನ್ನೂ ಮಾಡಲು ಒಪ್ಪಿಕೊಂಡಿದ್ದಾರೆ, ಈ ಕುರಿತು ನಮ್ಮ ಸ್ನೇಹಿತನನ್ನು ಸಂಪರ್ಕಿಸಬಹುದು (ಸಂಪರ್ಕಿಸಲು ಸೂಚಿಸಿದ ದೂರವಾಣಿ ಸಂಖ್ಯೆ ದಿಗ್ವಿಜಯ್ ಸಿಂಗ್ ಅವರದ್ದು ಎಂಬುದು ಚಾರ್ಜ್ ಶೀಟ್ ನಲ್ಲಿ ತಿಳಿದುಬಂದಿದೆ) ಎಂದು ಪತ್ರದಲ್ಲಿ ಬರೆಯಲಾಗಿದ್ದು ಪತ್ರವನ್ನು ಚಾರ್ಜ್ ಶೀಟ್ ನ ಭಾಗವನ್ನಾಗಿಸಲಾಗಿದೆ.
ವಶಪಡಿಸಿಕೊಳ್ಳಲಾಗಿರುವ ಪತ್ರದಲ್ಲಿ ಈ ರೀತಿಯ ಇನ್ನೂ ಹಲವು ದೂರವಾಣಿ ಸಂಖ್ಯೆಗಳು ಉಲ್ಲೇಖವಾಗಿವೆ, ದೂರವಾಣಿ ಸಂಖ್ಯೆಗಳ ಮಾಲಿಕರು ಹಾಗೂ ಬಂಧಿತರೊಂದಿಗೆ ಅವರಿಗಿದ್ದ ನಂಟಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪುಣೆ ಉಪ ಆಯುಕ್ತ ಸುಹಾಸ್ ಬವ್ಚೆ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos