ನವದೆಹಲಿ: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕರ್ತಾರ್ ಪುರ್ ಕಾರಿಡಾರ್ ಯೋಜನೆಯ ಶಂಕುಸ್ಥಾಪನೆ ಸಮಾರಂಭದಲ್ಲಿ ಕಾಶ್ಮೀರ ವಿಚಾರವನ್ನೆತ್ತಿರುವುದುವಿಷಾದಕರ ಎಂದು ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಜಮ್ಮು ಮತ್ತು ಕಾಶ್ಮೀರ ಭಾರತದ "ಅವಿಭಾಜ್ಯ ಅಂಗ" ಎಂದು ಸಚಿವಾಲಯ ಪುನರುಚ್ಚರಿಸಿದೆ.
ಪಾಕಿಸ್ತಾನದ ಪ್ರಧಾನ ಮಂತ್ರಿಯು ಧಾರ್ಮಿಕ ಕಾರಿಡಾರ್ ನಿರ್ಮಾಣ ಸಮಯದಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ.ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಅನಧಿಕೃತ ಉಲ್ಲೇಖವನ್ನು ನೀಡುವ ಮೂಲಕ ಸಿಖ್ಖ್ ಸಮುದಾಯದ ದೀರ್ಘಾವಧಿ ಬೇಡಿಕೆ ಆದ ಕರ್ತಾರ್ ಪುರ್ ಕಾರಿಡಾರ್ ಅಭಿವೃದ್ದಿ ಕುರಿತು ಅರ್ಥೈಸಿಕೊಳ್ಳುವುದಕ್ಕೆ ತಪ್ಪಿದ್ದಾರೆ ಎಂದು ಸಚಿವಾಲಯ ಹೇಳಿದೆ.
ಅಲ್ಲದೆ ಪಾಕಿಸ್ತಾನ ತನ್ನ ಅಂತರರಾಷ್ಟ್ರೀಯ ಜವಾಬ್ದಾರಿಗಳನ್ನು ಪೂರೈಸಬೇಕು ಮತ್ತು ಅದರ ನಿಯಂತ್ರಣದಲ್ಲಿನ ಭಾಗಗಳಲ್ಲಿ ಭಯೋತ್ಪಾದಕ ದಾಳಿಗಳಾಗುತ್ತಿದೆ ಇಂತಹಾ ದಾಳಿಕೋರರನ್ನು ಮಟ್ಟ ಹಾಕಲು ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಸಹ ಸಚಿವಾಲಯ ವಿವರಿಸಿದೆ.
ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಿಂದ ದೂರವಿರದಿದ್ದಲ್ಲಿ ಪಾಕಿಸ್ತಾನದೊಂದಿಗೆ ಯಾವ ಬಗೆಯ ಮಾತುಕತೆ ಅಸಾಧ್ಯ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೈದರಾಬಾದ್ ನಲ್ಲಿ ಹೇಳಿದ್ದರು.
ಕರ್ತಾರ್ ಪುರ ಕಾರಿಡಾರ್ ನಿರ್ಮಾಣಕ್ಕೂ ಭಾರತ-ಪಾಕ್ ಶಾಂತಿ ಮಾತುಕತೆಗೂ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ.