ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ನವದೆಹಲಿ: ಕರ್ತಾರ್ಪುರ ಕಾರಿಡಾರ್ ಯೋಜನೆಯ ವಿಚಾರವನ್ನು ಎರಡು ರಾಷ್ಟ್ರಗಳ ಮಾತುಕತೆಗಳೊಂದಿಗೆ ಹೋಲಿಕೆ ಮಾಡಬಾರದು. ಭಾರತದ ವಿರುದ್ಧ ಭಯೋತ್ಪಾದನೆ ಅಂತ್ಯಗೊಂಡರೆ ಮಾತ್ರ ಉಭಯ ರಾಷ್ಟ್ರಗಳೊಂದಿಗೆ ಮಾತುಕತೆ ಸಾಧ್ಯ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬುಧವಾರ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ದ್ವಿಪಕ್ಷೀಯ ಮಾತುಕತೆ, ಕರ್ತಾರ್ಪುರ ಕಾರಿಡಾರ್ ಯೋಜನೆ ಪ್ರತ್ಯೇಕ ವಿಚಾರಗಳಾಗಿವೆ. ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದಲೂ ಕರ್ತಾರ್ಪುರ ಕಾರಿಡಾರ್ ಯೋಜನೆಗಾಗಿ ಪಾಕಿಸ್ತಾನ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಲೇ ಇತ್ತು. ಆದರೆ, ಇದೇ ಮೊದಲ ಬಾರಿಗೆ ಪಾಕಿಸ್ತಾನ ಸಕಾರಾತ್ಮಕ ಸ್ಪಂದನೆ ನೀಡಿರುವುದಕ್ಕೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.
ಆದರೆ, ಕರ್ತಾರ್ಪುರ ಕಾರಿಡಾರ್ ಯೋಜನೆಯಿಂದ ಎರಡು ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಮಾತುಕತೆಗಳು ನಡೆಯುವುದಿಲ್ಲ. ಭಯೋತ್ಪಾದನೆ, ದ್ವಿಪಕ್ಷೀಯ ಮಾತುಕತೆ ಎರಡೂ ಒಂದೆಡೆ ಸಾಗಲು ಸಾಧ್ಯವಿಲ್ಲ. ಭಾರತದ ವಿರುದ್ಧ ಪಾಕಿಸ್ತಾನ ಭಯೋತ್ಪಾದನಾ ಚಟುವಟಿಕೆಗಳನ್ನು ನಿಲ್ಲಿಸಿದಾಗ ಮಾತ್ರ, ಉಭಯ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಮಾತುಕತೆಗಳು ನಡೆಯುತ್ತವೆ ಎಂದು ತಿಳಿಸಿದ್ದಾರೆ.