ದೇಶ

ನೀರವ್ ಮೋದಿಗೆ ಸೇರಿದ 637 ಕೋಟಿ ಮೌಲ್ಯದ ಆಸ್ತಿ-ಪಾಸ್ತಿ ಇಡಿ ವಶಕ್ಕೆ

Srinivasamurthy VN
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಲ್ಲಿರುವ ಉದ್ಯಮಿ ನೀರವ್ ಮೋದಿಗೆ ಸಂಬಂಧಿಸಿದ ಸುಮಾರು 637 ಕೋಟಿ ಮೌಲ್ಯದ ವಿದೇಶಿ ಆಸ್ತಿ-ಪಾಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ ಎಂದು ತಿಳಿದುಬಂದಿದೆ.
ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದು, ಭಾರತ ಮತ್ತು ನ್ಯೂಯಾರ್ಕ್ ನಲ್ಲಿರುವ ನೀರವ್ ಮೋದಿಗೆ ಸಂಬಂಧಿಸಿದ ಆಸ್ತಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ನ್ಯೂಯಾರ್ಕ್ ನಲ್ಲಿರುವ ಸುಮಾರು 29.99 ಮಿಲಿಯನ್ ಡಾಲರ್ ಮೊತ್ತದ ಚರಾಸ್ತಿಯೂ ಸೇರಿದಂತೆ ಒಟ್ಟು 637 ಕೋಟಿ ರೂ ಮೌಲ್ಯದ ಆಸ್ತಿ-ಪಾಸ್ತಿಯನ್ನು ಅಧಿಕಾರಿಗಳು ವಶಕ್ಕೆ  ಪಡೆದಿದ್ದಾರೆ. ಇದರಲ್ಲಿ ನೀರವ್ ಮೋದಿ ಸಂಸ್ಥೆಗೆ ಸೇರಿದ ಚಿನ್ನಾಭರಣಗಳೂ ಸೇರಿವೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ 5 ದೇಶಗಳಲ್ಲಿ ನೀರವ್ ಮೋದಿಗೆ ಸಂಬಂಧಿಸಿದ ಆಸ್ತಿ-ಪಾಸ್ತಿಗಳನ್ನು ಇಡಿ ಆಧಿಕಾರಿಗಳು ಜಪ್ತಿ ಮಾಡಿದ್ದು, ಈ ಪೈಕಿ ಐದು ಬ್ಯಾಂಕ್ ಖಾತೆಗಳು, 7 ಫ್ಲಾಟ್ ಗಳು ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ವಂಚಿಸಿದ ಆರೋಪ ಎದುರಿಸುತ್ತಿರುವ ನೀರವ್ ಮೋದಿ ಪ್ರಸ್ತುತ ಪರಾರಿಯಲ್ಲಿದ್ದು, ಅವರ ಬಂಧನಕ್ಕೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅಧಿಕಾರಿಗಳು ಕಾರ್ಯ ಮಗ್ನರಾಗಿದ್ದಾರೆ. ನೀರವ್ ಮೋದಿ ಹಾಂಕಾಂಗ್, ಅಮೆರಿಕ, ಬ್ರಿಟನ್, ಸ್ವಿಟ್ಜರ್ಲೆಂಡ್ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಆಸ್ತಿ ಹೊಂದಿದ್ದು, ಈ ಎಲ್ಲ ಆಸ್ತಿಗಳ ಮೇಲೂ ಇಡಿ ಕಣ್ಣಿಟ್ಟಿದೆ. 
SCROLL FOR NEXT