ದೇಶ

ಜಯಲಲಿತಾ ಸಾವು :ಪೊಲೀಸರಿಂದಲೇ ಸಿಸಿಟಿವಿ ಕ್ಯಾಮರಾಗಳ ಸ್ಥಗಿತ: ತನಿಖಾ ಆಯೋಗಕ್ಕೆ ಅಪೊಲೋ ಆಸ್ಪತ್ರೆ ಹೇಳಿಕೆ !

Nagaraja AB

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ  ಜಯಲಲಿತಾ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಜಯಲಿಲಿತಾ ಆಸ್ಪತ್ರೆಗೆ ದಾಖಲಾಗಿದ್ದ ವೇಳೆಯಲ್ಲಿ ಪೊಲೀಸರ ಸೂಚನೆ ಮೇರೆಗೆ ಕಾರಿಡಾರ್ ನಲ್ಲಿದ್ದ ಸಿಸಿಟಿವಿ ಕ್ಯಾಮರಾಗಳ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಅವರ ಸಾವು ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಸಮಿತಿ ಮುಂದೆ ಅಪೊಲೋ ಆಸ್ಪತ್ರೆ ಹೇಳಿಕೆ ನೀಡಿದೆ.

ಆಸ್ಪತ್ರೆಯಲ್ಲಿನ ಚಿಕಿತ್ಸಾ ಕೊಠಡಿಗಳಾದ ಐಸಿಯು ಅಥವಾ ಸಿಸಿಯುನಲ್ಲಿ  ಸಿಸಿಟಿವಿ ಕ್ಯಾಮರಾಗಳು ಇರಲಿಲ್ಲ ಎಂದು ಕಾನೂನು ಮ್ಯಾನೇಜರ್ ಎಸ್. ಎಂ ಮೋಹನ್ ಕುಮಾರ್, ನ್ಯಾಯಾಧೀಶ ಎ. ಅರುಮುಗಾಸ್ವಾಮಿ ತನಿಖಾ ಆಯೋಗದ ಮುಂದೆ ಆಸ್ಪತ್ರೆ ಪರವಾಗಿ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆಸ್ಪತ್ರೆ ಕಾರಿಡಾರ್ ಹಾಗೂ ಪ್ರವೇಶದ್ವಾರದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು ಎಂದು ಆಸ್ಪತ್ರೆ ಪರ ವಕೀಲೆ ಮೈಮೂನಾ ಬಾದ್ಸಾ ಆಸ್ಪತ್ರೆ ಪರ ಸಲ್ಲಿಸಿರುವ  ಅಫಿಡವಿಟ್ ನಲ್ಲಿ ಉಲ್ಲೇಖಿಸಿದ್ದಾರೆ.

ದಿವಂಗತ ಜಯಲಲಿತಾ ಅವರನ್ನು ಆಸ್ಪತ್ರೆಯೊಳಗಡೆಯೇ ಸ್ಕ್ಯಾನಿಂಗ್ ಮತ್ತಿತರ ಡಯಾಗ್ನೋಸ್ಟಿಕ್ ಪರೀಕ್ಷೆಗೆ ಕರೆದುಕೊಂಡು ಹೋದಾಗ, ಆ ಮಾರ್ಗದಲ್ಲಿನ ಸಿಸಿಟಿವಿ ಕ್ಯಾಮರಾಗಳು ಬಂದ್ ಆಗಿದ್ದವು. ಐಜಿಪಿ ಕೆ.ಎನ್. ಸತ್ಯಮೂರ್ತಿ ಮತ್ತಿತರ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ಅವುಗಳನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಆಸ್ಪತ್ರೆಯ ಎರಡನೇ ಅಂತಸ್ತಿನಲ್ಲಿನ ಚಿಕಿತ್ಸೆ ಕೊಠಡಿಗೆ ಜಯಲಲಿತಾ ಅವರನ್ನು ಪೊಲೀಸ್ ನಿಯಂತ್ರಣದಲ್ಲಿ ಚಿಕಿತ್ಸೆಗಾಗಿ ಕರೆದುಕೊಂಡು ಹೋದಾಗ  ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿದ್ದವು ಎಂದು ತನಿಖಾ ಸಮಿತಿ ಹೇಳಿರುವುದಾಗಿ  ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜಯಲಲಿತಾ ನಿಗೂಢ ಸಾವಿನ ಪ್ರಕರಣದ ತನಿಖಾ ಆಯೋಗದ ಮುಂದೆ ಇಂದು ರಾಜ್ಯಪಾಲ ವಿದ್ಯಾಸಾಗರ್  ರಾವ್ ಅವರ  ಕಾರ್ಯದರ್ಶಿ ರಮೇಶ್ ಚಂದ್ ಮೀನಾ, ಅಪೊಲೋ ಆಸ್ಪತ್ರೆ ಸುಬ್ಬಯ್ಯ ವಿಶ್ವನಾಥ್ ಮುಂತಾದವರು ಹಾಜರಾಗಿ ಹೇಳಿಕೆ ನೀಡಿದರು.

2016 ಸೆಪ್ಟೆಂಬರ್ 22 ರಂದು ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ 75 ದಿನಗಳ ಚಿಕಿತ್ಸೆ  ಬಳಿಕ  ಡಿಸೆಂಬರ್ 5, 2016 ರಂದು ಮೃತಪಟ್ಟಿದ್ದರು.

SCROLL FOR NEXT