ಜೈಪುರ: ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣದಲ್ಲಿ ತೊಡಗಿದ್ದು, ಅಧಿಕಾರಕ್ಕಾಗಿ ಸಮಾಜ ಒಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಆರೋಪಿಸಿದ್ದಾರೆ.
ಇಂದು ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟವಾಗುವ ಮುನ್ನ ಬಿಜೆಪಿ ಪ್ರಚಾರಾಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ, ದೇಶದ ಜನರು ತಮಗೆ ಅಭಿವೃದ್ಧಿ ರಾಜಕಾರಣ ಬೇಕೋ ವೋಟ್ ಬ್ಯಾಂಕ್ ರಾಜಕಾರಣ ಬೇಕೋ ಎಂಬುದನ್ನು ತೀರ್ಮಾನಿಸಬೇಕಿದೆ ಎಂದರು.
ಕಾಂಗ್ರೆಸ್ ಕಳೆದ 60 ವರ್ಷಗಳಿಂದ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಇದರಿಂದ ದೇಶದ ಅಭಿವವೃದ್ಧಿ ಸಾಧ್ಯವಿಲ್ಲ. ಆದರೆ ಬಿಜೆಪಿ ಜನರ ಕ್ಷೇಮಾಭ್ಯುಯದೊಂದಿಗೆ ದೇಶದ ಆರ್ಥಿಕಾಭಿವೃದ್ಧಿಯನ್ನು ಸಾಧಿಸುವುದಕ್ಕೆ ಕಟಿಬದ್ಧವಾಗಿದ್ದು ಆ ದಿಶೆಯಲ್ಲಿ ಅದು ನಿರಂತರ ಪ್ರಯತ್ನಗಳನ್ನು ಮಾಡುತ್ತಲೇ ಇದೆ ಎಂದು ಪ್ರಧಾನಿ ಹೇಳಿದರು.
ಕಾಂಗ್ರೆಸ್ ಪಕ್ಷ ವಂಶಾಡಳಿತೆಯ ಪಕ್ಷವಾಗಿ ಮುಂದುವರಿಯುತ್ತಿದೆ ಎಂದು ಟೀಕಿಸಿದ ಪ್ರಧಾನಿ ಮೋದಿ, "ರಾಜ್ಯದ (ರಾಜಸ್ಥಾನದ) ಮತ್ತು ದೇಶದ ಜನರು ನಮ್ಮ ಹೈಕಮಾಂಡ್ ಆಗಿದ್ದಾರೆ. ಕಾಂಗ್ರೆಸ್ ನ ಹೈಕಮಾಂಡ್ ಒಂದು ಕುಟುಂಬವಾಗಿದೆ' ಎಂದು ವಾಗ್ದಾಳಿ ನಡೆಸದರು.
ಕಾಂಗ್ರೆಸ್ ಪಕ್ಷ ತನ್ನ ಸ್ವಂತ ಹಿತಾಸಕ್ತಿಯ ರಕ್ಷಣೆಗಾಗಿ ಏನನ್ನೂ ಮಾಡಲು ಸಿದ್ಧವಿದೆ; ಇಂಥವರನ್ನು ನೀವು ಅಧಿಕಾರಕ್ಕೆ ತರಬೇಕೇ, ದೇಶವನ್ನು ಲೂಟುವುದಕ್ಕೆ ಅವರಿಗೆ ಅವಕಾಶ ಮಾಡಿಕೊಡಬೇಕೇ, ಅಭಿವೃದ್ಧಿಯ ಹಾದಿಯನ್ನು ವಿನಾಶದ ಹಾದಿಯನ್ನಾಗಿ ಮಾಡುವುದಕ್ಕೆ ಅವಕಾಶ ನೀಡಬೇಕೇ ? ಎಂದು ಪ್ರಶ್ನಿಸಿದರು.