ದೇಶ

ಜೆಎನ್ ಯು ವಿದ್ಯಾರ್ಥಿ ಕಾಣೆ ಪ್ರಕರಣ; ಮುಕ್ತಾಯ ವರದಿ ಸಲ್ಲಿಸಲು ಸಿಬಿಐಗೆ ದೆಹಲಿ ಹೈಕೋರ್ಟ್ ಅವಕಾಶ

Sumana Upadhyaya

ನವದೆಹಲಿ: ಸುಮಾರು ಎರಡು ವರ್ಷಗಳ ಹಿಂದೆ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಿಂದ ಕಾಣೆಯಾದ  ವಿದ್ಯಾರ್ಥಿ ನಜೀಬ್ ಅಹ್ಮದ್ ಪ್ರಕರಣದ ವಿಚಾರಣೆಗೆ ಸಂಬಂಧಿಸಿ ಮುಕ್ತಾಯ ವರದಿ ಸಲ್ಲಿಸಲು ದೆಹಲಿ ಹೈಕೋರ್ಟ್ ಸಿಬಿಐಗೆ ಅವಕಾಶ ನೀಡಿದೆ.

ವಿಶೇಷ ತನಿಖಾ ತಂಡ ರಚಿಸಿ ತನಿಖೆಯ ನಿಗಾವಹಿಸುವಂತೆ ಕಾಣೆಯಾದ ವಿದ್ಯಾರ್ಥಿಯ ತಾಯಿ ಫಾತಿಮಾ ನಫೀಸ್ ಸಲ್ಲಿಸಿದ್ದ ಮನವಿಯನ್ನು ಸ್ವೀಕರಿಸಲು ನ್ಯಾಯಮೂರ್ತಿಗಳಾದ ಎಸ್ ಮುರಳೀಧರ್ ಮತ್ತು ವಿನೋದ್ ಗೋಯಲ್ ಅವರನ್ನೊಳಗೊಂಡ ನ್ಯಾಯಪೀಠ ನಿರಾಕರಿಸಿದೆ.

2016ರ ನವೆಂಬರ್ ನಲ್ಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ನಫೀಜಾ, ತಮ್ಮ ಮಗನನ್ನು ಹುಡುಕಿಕೊಡಲು ಪೊಲೀಸರಿಗೆ ಆದೇಶ ನೀಡುವಂತೆ ಮನವಿ ಮಾಡಿದ್ದರು. ವಿಚಾರಣಾ ನ್ಯಾಯಾಲಯದ ಮುಂದೆ ತಮ್ಮ ಮನವಿಗಳನ್ನು ಸಲ್ಲಿಸಲು ನಫೀಸಾ ಅವರಿಗೆ ಅವಕಾಶ ನೀಡಿ ಹೈಕೋರ್ಟ್ ಸೆಪ್ಟೆಂಬರ್ 4ರಂದು ತೀರ್ಪನ್ನು ಕಾಯ್ದಿರಿಸಿತ್ತು.

ಕಳೆದ ವರ್ಷ ಮೇ 16ರಂದು ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸಿಬಿಐ ಒಂದು ವರ್ಷ ತನಿಖೆ ನಡೆಸಿದ ನಂತರ ಕೇಸಿನ ಎಲ್ಲಾ ಆಯಾಮಗಳನ್ನು ನೋಡಿಕೊಂಡು ಕಾಣೆಯಾದ ವಿದ್ಯಾರ್ಥಿ ವಿರುದ್ಧ ಯಾವುದೇ ತಪ್ಪು ನಡೆದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.

2016ರ ಅಕ್ಟೋಬರ್ 15ರಂದು ದೆಹಲಿಯ ಜವಾಹರ ಲಾಲ್ ವಿಶ್ವವಿದ್ಯಾಲಯದ ಮಹಿ-ಮಾಂಡ್ವಿ ಹಾಸ್ಟೆಲ್ ನಿಂದ ಅಹ್ಮದ್ ಕಾಣೆಯಾಗಿದ್ದರು. ಕಾಣೆಯಾದ ಹಿಂದಿನ ದಿನ ರಾತ್ರಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್  ಗೆ ಸೇರಿದ ವಿದ್ಯಾರ್ಥಿಗಳ ಜೊತೆ ಜಗಳ ನಡೆದಿತ್ತು.

ಇದೊಂದು ರಾಜಕೀಯ ಪಿತೂರಿಯ ಕೇಸಾಗಿದ್ದು ತಮ್ಮ ಮೇಲಿನ ಅಧಿಕಾರಿಗಳ ಒತ್ತಡಕ್ಕೆ ಸಿಬಿಐ ಅಧಿಕಾರಿಗಳು ಮಣಿಯುತ್ತಿದ್ದಾರೆ ಎಂದು ನಫೀಜಾ ಪರ ವಕೀಲ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದರು. 2016ರ ನವೆಂಬರ್ 25ರಂದು ನಫೀಜಾ ಹೈಕೋರ್ಟ್ ಮೊರೆ ಹೋಗಿ ತಮ್ಮ ಮಗನನ್ನು ಹುಡುಕಿಕೊಡಲು ಪೊಲೀಸರಿಗೆ ಆದೇಶ ನೀಡಬೇಕೆಂದು ಕೋರಿದ್ದರು.

ಕಾಣೆಯಾಗಿ ಏಳು ತಿಂಗಳು ಕಳೆದ ನಂತರವೂ ದೆಹಲಿ ಪೊಲೀಸರಿಗೆ ಅಹ್ಮದ್ ನ ಸುಳಿವು ಸಿಗದ ಕಾರಣ ಕಳೆದ ವರ್ಷ ಮೇ 16ರಂದು ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು.

SCROLL FOR NEXT