ದೇಶ

ತಿತ್ಲಿ ಚಂಡಮಾರುತಕ್ಕೆ ಆಂಧ್ರ ಪ್ರದೇಶದಲ್ಲಿ ಇಬ್ಬರು ಬಲಿ

Lingaraj Badiger
ಹೈದರಾಬಾದ್: ತಿತ್ಲಿ ಚಂಡಮಾರುತ ಗುರುವಾರ ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಪಲಾಸಾಕ್ಕೆ ಅಪ್ಪಳಿಸಿದ್ದು, ತಿತ್ಲಿಯ ಅಬ್ಬರಕ್ಕೆ ಇಬ್ಬರು ಮೃತಪಟ್ಟಿದ್ದಾರೆ ಮತ್ತು ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.
ಚಂಡಮಾರುತದಿಂದಾಗಿ ರಸ್ತೆಗಳು ಕೊಚ್ಚಿ ಹೋಗಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ ಮತ್ತು ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶ್ರೀಕಾಕುಳಂ ಜಿಲ್ಲೆಯ ಹಲವು ಕಡೆ ಬೀರುಗಾಳಿ ಸಹಿ ಮಳೆಯಾಗುತ್ತಿದ್ದು, ಈಗಾಗಲೆ ಹಲವು ಕಡೆ 2 ರಿಂದ 26 ಸೆ.ಮೀ.ವರೆಗೆ ಮಳೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ತಿತ್ಲಿ ಚಂಡಮಾರುತದಿಂದಾಗಿ ಹಲವು ಕಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಆಂಧ್ರ ಪ್ರದೇಶ ಸಾರಿಗೆ ಸಚಿವ ಕೆ.ಅಚ್ಚನಾಯ್ಡು ಅವರು ಚಂಡಮಾರುತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಜಿಲ್ಲಾಧಿಕಾರಿಗಳೊಂದಿಗೆ ಟೆಲೆಕಾನ್ಫೆರೆನ್ಸ್ ಮೂಲಕ ಸಭೆ ನಡೆಸಿದ್ದು, ಹೈ ಅಲರ್ಟ್ ಆಗಿರುವಂತೆ ಸೂಚಿಸಿದ್ದಾರೆ.
ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗಾಗಿ ಶ್ರೀಕಾಕುಳಂ ಜಿಲ್ಲೆಯಲ್ಲಿ ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ತಂಡಗಳನ್ನು ನಿಯೋಜಿಸಲಾಗಿದೆ.
SCROLL FOR NEXT