ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ವಿವಾದಿತ ರಫೇಲ್ ಒಪ್ಪಂದ ಕುರಿತು ತನಿಖೆ ನಡೆಸಲು ಉತ್ಸಾಹ ತೋರಿದ್ದೇ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರಿಗೆ ಮುಳುವಾಯಿತೇ ಎಂದು ಕಾಂಗ್ರೆಸ್ ಬುಧವಾರ ಪ್ರಶ್ನೆ ಮಾಡಿದೆ.
ಸಿಬಿಐನಲ್ಲಾದ ಭಾರೀ ಬದಲಾವಣೆ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಕೇಂದ್ರ ತನಿಖಾ ಸಂಸ್ಥೆಯಾಗಿರುವ ಸಿಬಿಐನ ವಿಶ್ವಾಸಾರ್ಹತೆ ಮತ್ತು ಘನತೆಯನ್ನು ಪ್ರದಾನಿ ಮೋದಿ ಸರ್ಕಾರ ಸಂಪೂರ್ಣವಾಗಿ ನಾಶ ಮಾಡಿದೆ ಎಂದು ಆರೋಪಿಸಿದೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ ಅವರು, ಸಿಬಿಐನ ಸ್ವಾಯತ್ತತೆ ಎಂಬ ಶವಪಟ್ಟಿಗೆಗೆ ಪ್ರಧಾನಿ ಮೋದಿ ಕೊನೆಯ ಮೊಳೆಯನ್ನು ಹೊಡೆದಿದ್ದಾರೆ. ಕೇಂದ್ರ ಸರ್ಕಾರ ಸಿಬಿಐ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಕಳಚಿದೆ ಮತ್ತು ಅದರ ವಿಶ್ವಾಸಾರ್ಹತೆ, ಘನತೆಯನ್ನು ನಾಶಮಾಡಿದೆ ಎಂದು ಹೇಳಿಕೊಂಡಿದ್ದಾರೆ.
ಒಂದು ಕಾಲದಲ್ಲಿ ಸಿಬಿಐಗೆ ಅಪಾರವಾದ ಘನತೆ, ಗೌರವ ಮತ್ತು ವಿಶ್ವಾಸಾರ್ಹತೆ ಇತ್ತು. ಅವುಗಳೆಲ್ಲವನ್ನೂ ಬಿಜೆಪಿ ನೇತೃತ್ವದ ಮೋದಿ ಸರ್ಕಾರ ನಾಶ ಮಾಡಿದೆ.
ವಿವಾದಿ ರಫೇಲ್ ಒಪ್ಪಂದದಲ್ಲಾದ ಭ್ರಷ್ಟಾಚಾರ ಕುರಿತು ತನಿಖೆ ನಡೆಸಲು ಸಿಬಿಐ ನಿರ್ದೇಶಕರು ಉತ್ಸಾಹ ತೋರಿದ್ದರು. ಇದೇ ಅವರ ಹುದ್ದೆಗೆ ಮುಳುವಾಯಿತೇ? ಇದಕ್ಕೆ ಪ್ರಧಾನಿ ಮೋದಿಯವರು ಉತ್ತರ ಕೊಡಬೇಕೆಂದು ಎಂದು ಸುರ್ಜೇವಾಲಾ ಆಗ್ರಹಿಸಿದ್ದಾರೆ.
ಇನ್ನು ಕಾಂಗ್ರೆಸ್'ನ ಈ ಆರೋಪದ ವಿರುದ್ದ ಜೇಟ್ಲಿ ಕಿಡಿಕಾರಿದ್ದು, ಅಧಿಕಾರಿಗಳು ಯಾವ ವಿಚಾರಗಳ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆಂಬ ಮಾಹಿತಿಗಳು ವಿರೋಧ ಪಕ್ಷಗಳಿಗೆ ದೊರಕಿದೆ ಎಂಬುದು ಅವರ ಆರೋಪಗಳಿಂದ ಸಾಬೀತಾಗುತ್ತಿದೆ. ಅಧಿಕಾರಿಗಳಿಗೆ ಬೆಂಬಲ ನೀಡುವ ಮೂಲಕ ವಿರೋಧ ಪಕ್ಷಗಳು ಅಧಿಕಾರಿಯ ವಿಶ್ವಾಸಾರ್ಹತೆಯನ್ನು ನಾಶಮಾಡಿದ್ದಾರೆಂದು ಹೇಳಿದ್ದಾರೆ.