ಶ್ರೀನಗರ: ಕಾಶ್ಮೀರದ ಎರಡು ಪ್ರತ್ಯೇಕ ಎನ್ ಕೌಂಟರ್ ನಲ್ಲಿ ಭಾರತೀಯ ಸೇನೆ 6 ಉಗ್ರರ ಹತ್ಯೆಗೈದಿದ್ದು, ತ್ರಾಲ್ ನಲ್ಲಿ ನಡೆದ ಉಗ್ರರ ಸ್ನೈಪರ್ ದಾಳಿಯಲ್ಲಿ ಓರ್ವ ಭಾರತೀಯ ಯೋಧ ಹುತಾತ್ಮನಾಗಿದ್ದಾನೆ.
ಕಾಶ್ಮೀರದಲ್ಲಿ 2 ಪ್ರತ್ಯೇಕ ಎನ್ ಕೌಂಟರ್, 6 ಉಗ್ರರ ಹತ್ಯೆ
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಮತ್ತು ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದ 2 ಪ್ರತ್ಯೇಕ ಎನ್ ಕೌಂಟರ್ನಲ್ಲಿ ಭದ್ರತಾ ಪಡೆಗಳು 6 ಉಗ್ರರನ್ನು ಹೊಡೆದುರುಳಿಸಿವೆ. ಗುರುವಾರ ಅನಂತನಾಗ್ ಜಿಲ್ಲೆಯ ಅರ್ವಾನಿನಲ್ಲಿ ನಡೆದ ಎನ್ ಕೌಂಟರ್ನಲ್ಲಿ 4 ಉಗ್ರರು ಮೃತಪಟ್ಟಿದ್ದರೆ, ಬಾರಾಮುಲ್ಲಾ ಜಿಲ್ಲೆಯ ಕ್ರೀರಿಯಲ್ಲಿ ನಡೆದ ಎನ್ ಕೌಂಟರ್ನಲ್ಲಿ ಲಷ್ಕರ್ ಎ ತೋಯೆಬಾ ಉಗ್ರ ಸಂಘಟನೆಯ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ.
ಘಟನಾ ಸ್ಥಳದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎನ್ ಕೌಂಟರ್ ನಡೆದ ಸ್ಥಳದಲ್ಲಿ ಗ್ರೆನೇಡ್ ಅಥವಾ ಬಾಂಬ್ ಗಳೂ ಸ್ಫೋಟಗೊಳ್ಳದೆ ಉಳಿದಿರಬಹುದಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜನರು ಆ ಸ್ಥಳಕ್ಕೆ ತೆರಳದಂತೆ ಸ್ಥಳೀಯರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಅಂತೆಯೇ ಸ್ಥಳದಲ್ಲಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ.
ಉಗ್ರರ ಸ್ನೈಪರ್ ದಾಳಿಗೆ ಯೋಧ ಹುತಾತ್ಮ
ಅತ್ತ ಎನ್ ಕೌಂಟರ್ ನಲ್ಲಿ ಭಾರತೀಯ ಸೇನೆ 6 ಉಗ್ರರ ಹೆಡೆಮುರಿ ಕಟ್ಟುತ್ತಿದ್ದಂತೆಯೇ ಇತ್ತ ದಕ್ಷಿಣ ಕಾಶ್ಮೀರದಲ್ಲೂ ಉಗ್ರರ ಚಟುವಟಿಕೆ ಮುಂದುವರೆದಿದೆ. ಈ ವೇಳೆ ಸ್ನೈಪರ್ ಗನ್ ಶಸ್ತ್ರಧಾರಿ ಉಗ್ರರ ಗುಂಪು ತ್ರಾಲ್ ಪೋಸ್ಟ್ ನಲ್ಲಿ ಸೇವಾನಿರತನಾಗಿದ್ದ ಯೋಧನ ಮೇಲೆ ಗುಂಡು ಹಾರಿಸಿದ್ದಾರೆ. ಪರಿಣಾಮ ಓರ್ವ ಯೋಧ ಹುತಾತ್ಮನಾಗಿದ್ದಾನೆ.
ಮೂಲಗಳ ಪ್ರಕಾರ ಇಂದು ರಾತ್ರಿ ಸುಮಾರು 9 ಗಂಟೆ ಸುಮಾರಿನಲ್ಲಿ ತ್ರಾಲ್ ಪೋಸ್ಟ್ ನ 42 ರಾಷ್ಟ್ರೀಯ ರೈಫಲ್ಸ್ ನ ಲುರಾಗಾಮ್ ಕ್ಯಾಂಪ್ ನಲ್ಲಿ ಈ ಘಟನೆ ನಡೆದಿದ್ದು, ಕರ್ತವ್ಯ ನಿರತ ಸೆಪೋಯ್ ನ್ಗಾಮಿಯಾ ಲಿಯಾನಾ ಎಂಬ ಯೋಧ ಸ್ಥಳದಲ್ಲೇ ಹುತಾತತ್ಮರಾಗಿದ್ದಾರೆ. ಉಗ್ರರು ಹಾರಿಸಿದ ಗುಂಡು ನೇರವಾಗಿ ಯೋಧನ ತಲೆ ಸೀಳಿದ್ದು, ಪರಿಣಾಮ ಯೋಧ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಂತೆಯೇ ಘಟನೆಯಲ್ಲಿ ಮತ್ತೋರ್ವ ಯೋಧನಿಗೆ ಗುಂಡೇಟು ತಗುಲಿದ್ದು ಅವರನ್ನು ಸೇನಾಸ್ಪತ್ರೆಗೆ ದಾಖಲು ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics