ನವದೆಹಲಿ: ಸ್ವ ಘೋಷಿತ ದೇವಮಾನವ ದಾತಿ ಮಹಾರಾಜ್ ಮತ್ತು ಇತರ ಮೂವರ ವಿರುದ್ಧ ಸಿಬಿಐ ಶುಕ್ರವಾರ ಅತ್ಯಾಚಾರ ಮತ್ತು ಅಸಹಜ ಲೈಂಗಿಕತೆ ಕೇಸು ದಾಖಲಿಸಿದೆ.
ಕಳೆದ 22ರಂದು ಸುಪ್ರೀಂ ಕೋರ್ಟ್, ಅತ್ಯಾಚಾರ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಿದ್ದ ಮನವಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಸಿಬಿಐಗೆ ಕೇಸು ವರ್ಗಾವಣೆ ಮಾಡುವಂತೆ ಆದೇಶ ನೀಡುವ ಮುನ್ನ ತಮ್ಮನ್ನು ಕೇಳಿರಲಿಲ್ಲ ಎಂದು ಕಳೆದ ವಾರ ವಿವಾದಿತ ಸ್ವಘೋಷಿತ ದೇವ ಮಾನವ ದಾತಿ ಮಹಾರಾಜ್ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿದ್ದರು.
ಈ ಹಿಂದೆ ಕೇಸಿನ ವಿಚಾರಣೆಯನ್ನು ದೆಹಲಿ ಪೊಲೀಸ್ ಅಪರಾಧ ವಿಭಾಗ ಕೈಗೆತ್ತಿಕೊಂಡಿತ್ತು.
2 ವರ್ಷಗಳ ಹಿಂದೆ ತನ್ನ ಶಿಷ್ಯೆ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ದಾತಿ ಮಹಾರಾಜ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 376(ಅತ್ಯಾಚಾರ), 377 (ಅಸಹಜ ಲೈಂಗಿಕತೆ), 354(ಹಿಂಸೆ) ಮತ್ತು 34(ಸಾಮಾನ್ಯ ಉದ್ದೇಶ)ದಡಿ ಕೇಸು ದಾಖಲಿಸಲಾಗಿತ್ತು. ಆದರೆ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ದಾತಿ ಮಹಾರಾಜ್ ಆರೋಪಿಸಿದ್ದರು.
ಕಳೆದ ಜೂನ್ 7ರಂದು ದಾತಿ ಮಹಾರಾಜ್ ವಿರುದ್ಧ ದೂರು ದಾಖಲಿಸಿ ಜೂನ್ 11ರಂದು ಎಫ್ಐಆರ್ ದಾಖಲಿಸಲಾಗಿತ್ತು.