ತಿರುವನಂತಪುರಂ: ಶಬರಿಮಲೆಗೆ ಮಹಿಳೆಯ ಪ್ರವೇಶ ಸಂಬಂಧ ನಡೆದ ಪ್ರತಿಭಟನೆ ವೇಳೆ ಕೇರಳ ಸರ್ಕಾರ ನಡೆದುಕೊಂಡ ರೀತಿಗೆ ಕೇರಳ ಹೈಕೋರ್ಟ್ ಕೆಂಡಾಮಂಡಲವಾಗಿದ್ದು, ಅಮಾಯಕರ ಬಂಧನವಾದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದೆ.
ಖ್ಯಾತ ಪವಿತ್ರ ಯಾತ್ರಾ ಸ್ಥಳ ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇರಳ ಸರ್ಕಾರ ಈ ವರೆಗೂ ಸುಮಾರು 2 ಸಾವಿರ ಮಂದಿಯನ್ನು ಬಂಧಿಸಿರುವುದಾಗಿ ಹೇಳಿದೆ. ಕೇರಳ ಸರ್ಕಾರದ ಈ ಕ್ರಮಕ್ಕೆ ಕೇರಳ ಹೈಕೋರ್ಟ್ ತೀವ್ರ ಅಸಮಾಧಾನಗೊಂಡಿದ್ದು, ಕಾನೂನು ಬಾಹಿರವಾದ ಬಂಧನಗಳ ಕುರಿತು ತನಗೆ ಮಾಹಿತಿ ಬರುತ್ತಿದೆ. ಒಂದು ವೇಳೆ ಸರ್ಕಾರ ಕಾನೂನು ಬಾಹಿರವಾದ ಬಂಧನ ಮಾಡಿದ್ದರೆ ಖಂಡಿತಾ ತೀವ್ರತರವಾದ ಪರಿಣಾಮ ಎದುರಿಸಬೇಕುಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಕೇರಳ ಸರ್ಕಾರದ ವಿರುದ್ದ ಅಯ್ಯಪ್ಪ ಭಕ್ತರಿಂದ ಹೈಕೋರ್ಟ್ ಗೆ ಅರ್ಜಿ
ಇನ್ನು ಶಬರಿಮಲೆ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇರಳ ಸರ್ಕಾರ ಮಾಡಿಸಿರುವ 2 ಸಾವಿರಕ್ಕೂ ಹೆಚ್ಚು ಬಂಧನಗಳಲ್ಲಿ ಅಮಾಯಕರನ್ನೂ ಸೇರಿಸಲಾಗಿದೆ. ಕೇರಳ ಪೊಲೀಸರು ದೊಡ್ಡ ಮಟ್ಟದಲ್ಲಿ ಕಾನೂನುಬಾಹಿರವಾಗಿ ಅಯ್ಯಪ್ಪ ಭಕ್ತರನ್ನು ಬಂಧಿಸಿದ್ದಾರೆ ಎಂದು ಪಟ್ಟಣಂತಿಟ್ಟದ ನಿವಾಸಿಗಳಾದ ಸುರೇಶ್ ಕುಮಾರ್ ಹಾಗೂ ಅನೋಜ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ವ್ಯಕ್ತಿಯ ವಿರುದ್ಧದ ಆಪಾದನೆಯನ್ನು ಪುಷ್ಟೀಕರಿಸುವ ಆಧಾರಗಳಿದ್ದಲ್ಲಿ ಮಾತ್ರವೇ ಬಂಧಿಸಬಹುದು ಎಂದು ಹೇಳಿದೆ.
ಅಂತೆಯೇ ಒಂದು ವೇಳೆ ಅಮಾಯಕರ ಬಂಧನವಾಗಿದ್ದಲ್ಲಿ ಸರ್ಕಾರ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಅಲ್ಲದೇ ಶಬರಿಮಲೆಗೆ ಭೇಟಿ ನೀಡಿದವರಲ್ಲಿ ಕೇವಲ ಭಕ್ತರು ಮಾತ್ರ ಇದ್ದರೋ ಅಥವಾ ಇನ್ನಾರಾದರೂ ಘಾತುಕರೂ ಸೇರಿದ್ದರೋ ಎಂಬುದನ್ನು ತನಿಖೆ ಮಾಡಲು ಕೂಡ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ. ಬಂಧನಗಳಿಗೆ ಸೂಕ್ತ ಕಾರಣಗಳನ್ನು ಒದಗಿಸಲು ಸರ್ಕಾರಕ್ಕೆ ಸೂಚಿಸಿರುವ ಹೈಕೋರ್ಟ್, ಅಕ್ಟೋಬರ್ 29ರಂದು ಈ ಸಂಬಂಧ ಮರುಪರಿಶೀಲನೆ ನಡೆಸುವುದಾಗಿ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics