ದೇಶ

ತಾರಕಕ್ಕೇರಿದ ಆರ್'ಬಿಐ-ಕೇಂದ್ರದ ನಡುವಿನ ಸಂಘರ್ಷ: ಊರ್ಜಿತ್ ಪಟೇಲ್ ರಾಜೀನಾಮೆ ಸಾಧ್ಯತೆ?

Manjula VN
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೇಂದ್ರ ಸರ್ಕಾರದ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಈ ಹಿನ್ನಲೆಯಲ್ಲಿ ಆರ್'ಬಿಐ ಗವರ್ನರ್ ಊರ್ಜಿತ್ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ. 
ಊರ್ಜಿತ್ ಪಟೇಲ್ ಮತ್ತು ಕೇಂದ್ರದ ನಡುವೆ ಕೆಲ ದಿನಗಳಿಂದ ಸರಿಪಡಿಸಲಾಗದಂತಹ ಬಿಕ್ಕಟ್ಟು ಉದ್ಭವಿಸಿದ್ದು, ಹೀಗಾಗಿ ಪಟೇಲ್ ಅವರು ರಾಜೀನಾಮೆ ನೀಡುವ ಎಲ್ಲಾ ಸಾಧ್ಯತೆಗಳಿವೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. 
ಕೇಂದ್ರ ಸರ್ಕಾರದ ವಿರುದ್ಧ ಸೆಡ್ಡು ಹೊಡೆದಿದ್ದ ಊರ್ಜಿತ್ ಪಟೇಲ್ ಅವರನ್ನು ದಾರಿಗೆ ತರಲು ಈ ಹಿಂದೆ ಸರ್ಕಾರ ಆರ್'ಬಿಐ ಕಾಯ್ದೆಯ 7ನೇ ಸೆಕ್ಷನ್ ಅನ್ವಯ ಸೂಚನೆಗಳನ್ನು ರವಾನಿಸಿದ್ದು ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. 
ಹೀಗಾಗಿ ಕೇಂದ್ರ ಸರ್ಕಾರ ಸೆಕ್ಷನ್ 7ರ ಅನ್ವಯ ತನ್ನ ನಿರ್ಧಾರಗಳನ್ನು ಹೇರಿದ್ದೇ ಆದರೆ, ಊರ್ಜಿತ್ ಪಟೇಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಆರ್'ಬಿಐ ಆಗಲೀ, ವಿತ್ತ ಸಚಿವಾಲಯವಾಗಲೀ ಯಾವುದೇ ರೀತಿಯ ಸ್ಪಷ್ಟೀಕರಣಗಳನ್ನು ನೀಡಿಲ್ಲ. 
1991 ಹಾಗೂ 2008ರಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾದಾಗಲೂ ಕೇಂದ್ರ ಸರ್ಕಾರ ಆರ್'ಬಿಐ ಮೇಲೆ ಸೆಕ್ಷನ್ 7 ಜಾರಿ ಮಾಡಿರಲಿಲ್ಲ. 
SCROLL FOR NEXT