ದೇಶ

22 ವರ್ಷಗಳ ಹಳೆಯ ಮಾದಕವಸ್ತು ಮಾರಾಟ ಪ್ರಕರಣ: ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಸಿಐಡಿ ವಶಕ್ಕೆ

Srinivasamurthy VN
ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್ ಎಸ್ಎಸ್ ಅನ್ನು ಬಹಿರಂಗವಾಗಿಯೇ ಟೀಕಿಸಿ ಸುದ್ದಿಗೆ ಗ್ರಾಸವಾಗಿದ್ದ ಗುಜರಾತ್‌ ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ ಅವರನ್ನು ಸಿಐಡಿ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ.
1998ರಲ್ಲಿ ಸಂಜೀವ್ ಭಟ್‌ ಡಿಸಿಪಿಯಾಗಿ ಕೆಲಸ ಮಾಡುವಾಗ ವಕೀಲರೊಬ್ಬರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಿದ್ದರು. ಅವರ ಮೇಲೆ ನಕಲಿ ಮಾದಕವಸ್ತು ಮಾರಾಟ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಈ ಪ್ರಕರಣದ ವಿಚಾರಣೆ ಗುಜರಾತ್ ಹೈಕೋರ್ಟ್ ನಲ್ಲಿ ನಡೆಯುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ ಸಿಐಡಿ ಪೊಲೀಸರು ಸಂಜೀವ್‌ ಭಟ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 
2002ರ ಗುಜರಾತ್‌ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು. ಬಳಿಕ 2015ರಲ್ಲಿ ಸಂಜೀವ್ ಭಟ್‌ ಅವರನ್ನು ಐಪಿಎಸ್‌ ಸೇವೆಯಿಂದಲೂ ವಜಾ ಮಾಡಲಾಗಿತ್ತು. ಈ ನಡುವೆ ಸಂಜೀವ್ ಭಟ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್ ಎಸ್ಎಸ್ ಅನ್ನು ಬಹಿರಂಗವಾಗಿಯೇ ಟೀಕಿಸಿ ಸುದ್ದಿಗೆ ಗ್ರಾಸವಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸರಣಿ ಲೇಖನ ಬರೆಯುವ ಮೂಲಕ ಸಂಜೀವ್ ಭಟ್ ಸುದ್ದಿಯಾಗುತ್ತಿದ್ದಾರೆ. 
ಈ ಹಿಂದೆ ಇದೇ ಸಂಜೀವ್ ಭಟ್ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನ ಮುಂದೆ 'ಜೀ' ಪದ ಬಳಕೆಗೂ ಆಕ್ಷೇಪ ವ್ಯಕ್ತಪಡಿಸಿದ್ದ ಅವರು, ಮೋದಿ ಹೆಸರಿನ ಮುಂದೆ ಜೀ ಪದ ಬಳಕೆ ಮಾಡುತ್ತಿರುವುದೇಕೆ..? ಹಂದಿ ಮತ್ತು ಕತ್ತೆಗಳ ಹೆಸರು ಬರೆಯುವಾಗ ನಾವು ಹಂದಿ ಜೀ, ಕತ್ತೆ ಜೀ ಎಂದು ಸಂಭೋದನೆ ಮಾಡುತ್ತೇವೆಯೇ ಎಂದು ಟ್ವೀಟ್ ಮಾಡಿ ಮೋದಿ ಬೆಂಬಲಿಗರ ಆಕ್ರೋಶಕ್ಕೆ ತುತ್ತಾಗಿದ್ದರು. 
SCROLL FOR NEXT