ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ನವದೆಹಲಿ: ದೇಶ ಬಿಟ್ಟು ಓಡಿಹೋದ ಕ್ರಿಮಿನಲ್ ಗಳ ಜೊತೆಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಕೈಜೋಡಿಸಿದ್ದಾರೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರ ಆರೋಪಿಸಿದ್ದಾರೆ.
ವಿದೇಶಕ್ಕೆ ತೆರಳುವ ಮುನ್ನ ನಾನು ವಿತ್ತ ಸಚಿವರನ್ನು ಬೇಟಿ ಮಾಡಿದ್ದೆ. ನಾನು ಮಾಡಿದ್ದ ರೂ.9 ಸಾವಿರ ಕೋಟಿ ಬ್ಯಾಂಕ್ ಸಾಲ ಮರುಪಾವತಿಸುವ ಬಗ್ಗೆ ಪ್ರಸ್ತಾಪ ಇರಿಸಿದ್ದೆ ಎಂದು ಮಲ್ಯ ಅವರು ಹೇಳಿಕೆ ನೀಡಿದ್ದರು. ಮಲ್ಯ ಅವರ ಈ ಹೇಳಿಕೆ ಆಡಳಿತಾರೂಢ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ತೀವ್ರ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.
ಮಲ್ಯ ಅವರ ಹೇಳಿಕೆ ಸಂಬಂಧ ಆಡಳಿತಾರೂಢ ಸರ್ಕಾರದ ವಿರುದ್ಧ ನಿನ್ನೆಯಷ್ಟೇ ತೀವ್ರವಾಗಿ ಕಿಡಿಕಾರಿದ್ದ ರಾಹುಲ್ ಗಾಂಧಿಯವರು ತನಿಖೆಗೆ ಆಗ್ರಹಿಸಿದ್ದರು.
ಇದೀಗ ರಾಜಧಾನಿ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅರುಣ್ ಜೇಟ್ಲಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಿನ್ನಯಷ್ಟೇ ವಿಜಯ್ ಮಲ್ಯ ಅವರು ಸಂಸತ್ತಿನಿಂದ ಹೊರ ಬರುವುದಕ್ಕೂ ಮುನ್ನು ಅರುಣ್ ಜೇಟ್ಲಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೆ ಎಂದು ಹೇಳಿದ್ದರು. ಎಲ್ಲಾ ಭೇಟಿಗಳ ಕುರಿತಂತೆ ಅರುಣ್ ಜೇಟ್ಲಿಯವರು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಾರೆ. ಆದರೆ, ಈ ಭೇಟಿ ಕುರಿತಂತೆ ಮಾತ್ರ ಎಲ್ಲಿಯೂ ಬರೆದಿಲ್ಲವೇಕೆ ಎಂಬುದು ನನಗೆ ತಿಳಿಯುತ್ತಿಲ್ಲ. ಮಲ್ಯ ಜೊತೆಗೆ ಸ್ವಲ್ಪವೇ ಮಾತನಾಡಿದ್ದೆ ಎಂದು ಜೇಟ್ಲಿ ಸುಳ್ಳು ಹೇಳುತ್ತಿದ್ದಾರೆಂದು ಹೇಳಿದ್ದಾರೆ.
ದೇಶಬಿಟ್ಟು ಓಡಿಹೋಗಿರುವ ವ್ಯಕ್ತಿಯೊಂದಿಗೆ ವಿತ್ತ ಸಚಿವರು ಮಾತನಾಡಿದ್ದಾರೆ. ಪಲಾಯನಗೊಳ್ಳುತ್ತಿದ್ದ ವ್ಯಕ್ತಿ ವಿತ್ತ ಸಚಿವರ ಬಳಿಯೇ ತಾನು ದೇಶ ಬಿಟ್ಟು ಓಡಿಹೋಗುತ್ತಿರುವ ವಿಚಾರವನ್ನು ಹೇಳಿದ್ದಾನೆ. ಮಲ್ಯ ದೇಶ ಬಿಡುತ್ತಿರುವ ವಿಚಾರ ತಿಳಿದಿದ್ದರೂ ಜೇಟ್ಲಿ, ಸಿಬಿಐಗಾಗಲೀ, ಜಾರಿ ನಿರ್ದೇಶನಕ್ಕಾಗಲೀ ಅಥವಾ ಪೊಲೀಸರಿಗಾಗಲಿ ಮಾಹಿತಿ ನೀಡಿಲ್ಲವೇಕೆ? ಬಂಧನದ ನೋಟಿಸ್ ಮಾಹಿಯ ನೋಟಿಸ್ ಆಗಿ ಬದಲಾಗಿದೆ. ಸಿಬಿಐನ್ನು ನಿಯಂತ್ರಿಸುವವರು ಮಾತ್ರ ಈ ಕೆಲಸವನ್ನು ಮಾಡಬಲ್ಲರು.
ದೇಶದ ಹಣಕಾಸು ಸಚಿವರು ದೇಶಬಿಟ್ಟು ಓಡಿಹೋದ ಕ್ರಿಮಿನಲ್ ಜೊತೆಗೂಡಿದ್ದಾರೆ. ರಫೇಲ್ ಯುದ್ಧ ವಿಮಾನ ಒಪ್ಪಂ ಕುರಿತಂತೆ ಸರ್ಕಾರ ಸುಳ್ಳು ಹೇಳುತ್ತಿದೆ. ವಿಜಯ್ ಮಲ್ಯ ಕುರಿತಂತೆಯೂ ಸುಳ್ಳು ಹೇಳುತ್ತಿದೆ. ಹಣಕಾಸು ಸಚಿವವೇ ಮಲ್ಯಗೆ ದೇಶ ಬಿಟ್ಟು ಹೋಗಲು ಮುಕ್ತ ದಾರಿ ಮಾಡಿಕೊಟ್ಟಿದ್ದಾರೆ. ಮಲ್ಯ ನಿಮ್ಮ ಬಳಿಯೇ ಬಂದು ಮಾತನಾಡಿದ್ದರೂ ಈ ಬಗ್ಗೆ ಸಿಬಿಐ, ಇಡಿಗೆ ಮಾಹಿತಿ ನೀಡಲಿಲ್ಲವೇಕೆ? ಈ ಬೆಳವಣಿಗೆಗಳನ್ನು ನೋಡಿದರೆ, ಯಾವುದೇ ಒಳ ಒಪ್ಪಂದಗಳಾಗಿರುವುದು ಸ್ಪಷ್ಟವಾಗುತ್ತಿದೆ. ವಿತ್ತ ಸಚಿವರು ಈ ಸಂಬಂಧ ಪಾರದರ್ಶಕವಾಗಿ ಮಾಹಿತಿ ನೀಡಬೇಕು ಮತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ರಾಹುಲ್ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics