ದೇಶ

ಹರ್ಯಾಣ ಸಿಬಿಎಸ್ಇ ಟಾಪರ್ ರೇಪ್ ಕೇಸ್: ಸೇನಾ ಯೋಧ ಸೇರಿ ಮೂವರು ಭಾಗಿ- ಪೊಲೀಸ್

Srinivas Rao BV
ಮಹೇಂದ್ರಗಢ: 2018ನೇ ಸಾಲಿನ ಸಿಬಿಎಸ್ ಇ ಪರೀಕ್ಷೆಯಲ್ಲಿ ಇಡೀ ದೇಶಕ್ಕೆ ಅಗ್ರ ಸ್ಥಾನ ಪಡೆದಿದ್ದ ಹರ್ಯಾಣ ಮೂಲದ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದ ಪ್ರಕರಣದಲ್ಲಿ ಸ್ಫೋಟಕ ಮಾಹಿತಿಯೊಂದು ಬಹಿರಂಗಗೊಂಡಿದ್ದು, ಸೇನಾ ಸಿಬ್ಬಂದಿಒಯೂ ಗ್ಯಾಂಗ್ ರೇಪ್ ನಲ್ಲಿ ಶಾಮೀಲಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 
ಹರ್ಯಾಣ ಡಿಜಿಪಿ ಬಿಎಸ್ ಸಂಧು ಈ ಬಗ್ಗೆ ಮಾಹಿತಿ ನೀಡಿದ್ದು, ಒಟ್ಟಾರೆ ಮೂವರು ಆರೋಪಿಗಳ ಪೈಕಿ ಸೇನಾ ಯೋಧನೂ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾನೆ ಎಂದು ಹೇಳಿದ್ದು ಆತನನ್ನು ಬಂಧಿಸಲು ರಾಜಸ್ಥಾನಕ್ಕೆ ಪೊಲೀಸರ ತಂಡ ತೆರಳಿದೆ ಎಂದಿದ್ದಾರೆ. 
ಪ್ರಕರಣದ ಇನ್ನಿಬ್ಬರು ಆರೋಪಿಗಳಿಗಾಗಿ ಶೋಧಕಾರ್ಯ ನಡೆದಿದ್ದು, ಶೀಘ್ರವೇ ಎಲ್ಲಾ ಆರೋಪಿಗಳನ್ನೂ ಹೆಡೆಮುರಿಕಟ್ಟಲಾಗುತ್ತದೆ ಎಂದು ಹರ್ಯಾಣ ಡಿಜಿಪಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪರಿಚಿತರಿಂದಲೇ 19 ವರ್ಷದ ಯುವತಿ ಅತ್ಯಾಚಾರಕ್ಕೊಳಗಾಗಿದ್ದು, ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. 
ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ, ಪಾನೀಯದಲ್ಲಿ ಆಕೆಗೆ ಮತ್ತು ಬರುವ ವಸ್ತುವನ್ನು ಬೆರೆಸಿ ಈ ಕೃತ್ಯ ಎಸಗಲಾಗಿದೆ. ಸಂತ್ರಸ್ಥ ಯುವತಿ ಹೇಳಿಕೊಂಡಿರುವಂತೆ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿಯಾದ ಈಕೆ ಕೋಚಿಂಗ್ ಸೆಂಟರ್‌ಗೆ ಹೋಗುತ್ತಿದ್ದಾಗ ಮಾರ್ಗಮಧ್ಯದಲ್ಲಿ ದುಷ್ಕರ್ಮಿಗಳು ಆಕೆಯನ್ನು ಅಪಹರಿಸಿ, ನಿರ್ಜನ ಪ್ರದೇಶದಲ್ಲಿದ್ದ ಹೊಲಕ್ಕೆ ಎಳೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ.  ಪ್ರಕರಣದಲ್ಲಿ ಪೊಲೀಸರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಸಂತ್ರಸ್ತೆಯ ತಾಯಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಮೂವರೂ ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. 
SCROLL FOR NEXT