ಹೈದರಾಬಾದ್: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ರೂಪಾಯಿ ಮೌಲ್ಯದ ನಿರಂತರ ಕುಸಿತದ ಬಗ್ಗೆ ಸರ್ಕಾರಕ್ಕೂ ಆತಂಕವಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಪರಿಸ್ಥಿತಿಯಿಂದಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು, ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿದೆ. ಈ ಸಮಸ್ಯೆಗೆ ಶೀಘ್ರವೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ. ಹೈದರಾಬಾದ್ ನಲ್ಲಿ ಮಾತನಾಡಿರುವ ಅಮಿತ್ ಶಾ, ಪೆಟ್ರೋಲ್ ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತಕ್ಕೆ ಶೀಘ್ರವೇ ಪರಿಹಾರ ಕಂಡುಕೊಂಡು ಜನತೆ ಎದುರು ಬರಲಿದ್ದೇವೆ ಎಂದು ಹೇಳಿದ್ದಾರೆ.
ಬೇರೆ ರಾಷ್ಟ್ರಗಳ ಕರೆನ್ಸಿ ಡಾಲರ್ ಎದುರು ಕುಸಿಯುತ್ತಿರುವ ಮಟ್ಟಕ್ಕೆ ಹೋಲಿಸಿದರೆ ಭಾರತದ ರೂಪಾಯಿ ಮೌಲ್ಯ ಎಷ್ಟೋ ಉತ್ತಮವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.