ಮನವಿ ಸಲ್ಲಿಸುತ್ತಿರುವ ಕಾಂಗ್ರೆಸ್ ನಾಯಕರು
ಪಣಜಿ: ಅತ್ತ ಅನಾರೋಗ್ಯದ ನಿಮಿತ್ತ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಇತ್ತ ಪ್ರತಿಪಕ್ಷ ಕಾಂಗ್ರೆಸ್ ರಾಜಭವನಕ್ಕೆ ತೆರಳಿ ನೂತನ ಸರ್ಕಾರ ರಚಿಸುವ ಹಕ್ಕು ಮಂಡಿಸಿದೆ.
ಮನೋಹರ್ ಪರಿಕ್ಕರ್ ಅವರ ಸರ್ಕಾರ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಬಿಜೆಪಿ ನೇತೃತ್ವದ ಸರ್ಕಾರವನ್ನು ವಜಾಗೊಳಿಸಿ, ನೂತನ ಸರ್ಕಾರ ರಚನೆಗೆ ನಮಗೆ ಆಹ್ವಾನ ನೀಡುವಂತೆ ಕಾಂಗ್ರೆಸ್ ರಾಜ್ಯಪಾಲೆ ಮೃದುಲ ಸಿನ್ಹಾ ಅವರಿಗೆ ಸಲ್ಲಿಸಿದ ಪತ್ರದಲ್ಲಿ ಮನವಿ ಮಾಡಿದೆ.
ಕಾಂಗ್ರೆಸ್ ಶಾಸಕಾಂಗ ಸಭೆಯ ನಂತರ ನಾವು ರಾಜಭವನಕ್ಕೆ ತೆರಳಿ ಮನವಿ ಸಲ್ಲಿಸಿದ್ದೇವೆ. ಆದರೆ ರಾಜ್ಯಪಾಲರು ಇರಲಿಲ್ಲ. ಹೀಗಾಗಿ ಮತ್ತೆ ನಾಳೆ ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ. ರಾಜ್ಯಪಾಲರು ಯಾವುದೇ ಕಾರಣಕ್ಕೂ ವಿಧಾನಸಭೆ ವಿಸರ್ಜನೆ ಮಾಡಬಾರದು. ನಮಗೆ ಅವಕಾಶ ನೀಡಲಿ. ಕಾಂಗ್ರೆಸ್ ಸರ್ಕಾರ ರಚಿಸಲಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಚಂದ್ರಕಾಂತ್ ಕವಲೆಕರ್ ಅವರು ಹೇಳಿದ್ದಾರೆ.
ನಾವು ಕಾಂಗ್ರೆಸ್ ಪಕ್ಷದ 16 ಶಾಸಕರು ಸಹಿ ಮಾಡಿದ ಪತ್ರವನ್ನು ರಾಜ್ಯಪಾಲರಿಗೆ ನೀಡಿದ್ದೇವೆ ಮತ್ತು ನಮ್ಮದು ಏಕೈಕ ಅತಿ ದೊಡ್ಡ ಪಕ್ಷವಾಗಿದೆ ಎಂದು ಕವಲೆಕರ್ ಅವರು ತಿಳಿಸಿದ್ದಾರೆ.
ಮನೋಹರ್ ಪರಿಕ್ಕರ್ ಅವರು ಕಳೆದ ಶನಿವಾರ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos