ಬೇಕಿದ್ರೆ ಶೂಟ್ ಮಾಡಿ, ಆದ್ರೆ ಸೇನಾ ಮಾಹಿತಿ ಕೇಳಬೇಡಿ: ಉಗ್ರರಿಂದ ಹತ್ಯೆಯಾದ ವೀರ ಯೋಧನ ಕೊನೆಯ ಮಾತು!
ಬೇಕಿದ್ದರೆ ನನ್ನನ್ನು ಶೂಟ್ ಮಾಡಿ, ಆದರೆ ಯಾವುದೇ ಕಾರಣಕ್ಕೂ ಸೇನಾ ಮಾಹಿತಿ ಕೇಳಬೇಡಿ... ಇದು ಇತ್ತೀಚೆಗೆ ಉಗ್ರರಿಂದ ತನ್ನದೇ ಮನೆಯಲ್ಲಿ ಹತ್ಯೆಯಾದ ಲ್ಯಾನ್ಸ್ ನಾಯಕ್ ಮುಖ್ತಾರ್ ಅಹಮದ್ ಮಲಿಕ್ ಅವರ ಕೊನೆಯ ಮಾತಗಳು..
ಶ್ರೀನಗರ: ಬೇಕಿದ್ದರೆ ನನ್ನನ್ನು ಶೂಟ್ ಮಾಡಿ, ಆದರೆ ಯಾವುದೇ ಕಾರಣಕ್ಕೂ ಸೇನಾ ಮಾಹಿತಿ ಕೇಳಬೇಡಿ... ಇದು ಇತ್ತೀಚೆಗೆ ಉಗ್ರರಿಂದ ತನ್ನದೇ ಮನೆಯಲ್ಲಿ ಹತ್ಯೆಯಾದ ಲ್ಯಾನ್ಸ್ ನಾಯಕ್ ಮುಖ್ತಾರ್ ಅಹಮದ್ ಮಲಿಕ್ ಅವರ ಕೊನೆಯ ಮಾತಗಳು..
ಹೌದು.. ಇತ್ತೀಚೆಗೆ ಅಪಘಾತದಲ್ಲಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡಿ ಪ್ರಾಣಬಿಟ್ಟ ಮಗನ ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ಸೈನಿಕ ಲ್ಯಾನ್ಸ್ ನಾಯಕ್ ಮುಖ್ತಾರ್ ಅಹಮದ್ ಮಲಿಕ್ ಅವರನ್ನು ಅವರ ಮನೆಗೇ ನುಗ್ಗಿ ಉಗ್ರರು ಗುಂಡಿಟ್ಟು ಹತ್ಯೆಗೈದಿದ್ದರು. ಆದರೆ ಹತ್ಯೆಗೂ ಮುನ್ನ ಆ ಮನೆಯಲ್ಲಿ ದೊಡ್ಡ ಹೈಡ್ರಾಮವೇ ನಡೆದಿದ್ದು, ಲ್ಯಾನ್ಸ್ ನಾಯಕ್ ಮುಖ್ತಾರ್ ಅಹಮದ್ ಮಲಿಕ್ ಅವರಿಗೆ ಗುಂಡಿಕ್ಕುವ ಮುನ್ನ ಉಗ್ರರು ಅವರಿಂದ ಸೇನಾ ಮಾಹಿತಿ ಪಡೆಯಲು ಹರಸಾಹಸ ಪಟ್ಟಿದ್ದಾರೆ. ಆದರೆ ಉಗ್ರರ ಯಾವುದೇ ಬೆದರಿಕೆಗಳಿಗೂ ಜಗ್ಗದ ಲ್ಯಾನ್ಸ್ ನಾಯಕ್ ಮುಖ್ತಾರ್ ಅಹಮದ್ ಮಲಿಕ್ ಅವರು, ಬೇಕಿದ್ದರೆ ನನ್ನನ್ನು ಶೂಟ್ ಮಾಡಿ.. ಆದರೆ ಸೇನಾ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅಂತಿಮವಾಗಿ ಇವರಿಂದ ಯಾವುದೇ ಮಾಹಿತಿ ಲಭ್ಯವಾಗುವುದಿಲ್ಲ ಎಂದು ಅರ್ಥ ಮಾಡಿಕೊಂಡ ಉಗ್ರರು ಅವರನ್ನು ಗುಂಡಿಕ್ಕಿ ಹತ್ಯೆಗೈದು ಪರಾರಿಯಾಗಿದ್ದಾರೆ. ಆ ಮೂಲಕ 43 ವರ್ಷದ ಲ್ಯಾನ್ಸ್ ನಾಯಕ್ ಮುಖ್ತಾರ್ ಅಹಮದ್ ಮಲಿಕ್ ಅವರ ತಮ್ಮ ಮಗನ ಸಾವಿನ ಬಳಿಕ ಅವನನ್ನೇ ಹಿಂಬಾಲಿಸಿದ್ದಾರೆ.
ಇಷ್ಟಕ್ಕೂ ಅಲ್ಲಿ ಆಗಿದ್ದೇನು?
ಜಮ್ಮು ಕಾಶ್ಮೀರದ ಕುಲಗಮ್ ಜಿಲ್ಲೆಯ ಚುರತ್ ಗ್ರಾಮದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದರು. ಲ್ಯಾನ್ಸ್ ನಾಯಕ್ ಮುಖ್ತಾರ್ ಅಹಮದ್ ಮಲಿಕ್ ಹತರಾದ ಸೈನಿಕ. 43 ವರ್ಷದ ಮಲಿಕ್ ಅವರು ತಮ್ಮ ಪುತ್ರನ ಅಂತ್ಯ ಸಂಸ್ಕಾರಕ್ಕೆಂದು ರಜೆ ಮೇಲೆ ಬಂದಾಗ ಉಗ್ರರು ದಾಳಿ ಮಾಡಿ ಕೊಂದು ಹಾಕಿದ್ದರು. ಸೈನಿಕ ಮಲಿಕ್ ಅವರ ಪುತ್ರ ಅಪಘಾತದಲ್ಲಿ ಗಾಯಗೊಂಡು ಸೇನಾ ಆಸ್ಪತ್ರೆಯಲ್ಲಿ ನಾಲ್ಕು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆತ ಸೆ.15ರಂದು ಮೃತಪಟ್ಟಿದ್ದ. ಅಂತೆಯೇ ಮಲಿಕ್ ಅವರು ರಜೆ ಪಡೆದು ಪುತ್ರನ ಅಂತ್ಯಸಂಸ್ಕಾರಕ್ಕೆ ಆಗಮಿಸಿದ್ದರು.
ಪುತ್ರನನ್ನು ಕಳೆದುಕೊಂಡ ದುಃಖದಲ್ಲಿದ್ದ ಸೈನಿಕ ಮನೆಗೆ ಉಗ್ರರು ನುಗ್ಗಿ, ಸೇನೆ ನಿಯೋಜನೆ ಕುರಿತು ಮಾಹಿತಿ ನೀಡುವಂತೆ ಮಲಿಕ್ ಅವರಿಗೆ ಪ್ರಶ್ನಿಸಿದ್ದರು. ಆದ್ರೆ ವೀರ ಯೋಧ ಮಲಿಕ್, ಉಗ್ರರ ಬೆದರಿಕೆ ಹೆದರದೆ 'ಬೇಕಿದ್ರೆ ಗುಂಡಿಕ್ಕಿ, ಆದ್ರೆ ಪ್ರಶ್ನೆಗಳನ್ನು ಕೇಳಬೇಡಿ' ಎಂದು ಉತ್ತರಿಸಿದ್ದರು. ಮಲಿಕ್ ಯಾವುದೇ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಗುಂಡಿಕ್ಕಿ ಕೊಂದು ಸ್ಥಳದಿಂದ ಉಗ್ರರು ಪರಾರಿ ಆಗಿದ್ದಾರೆ. ಇನ್ನು ಮಲ್ಲಿಕ್ ಟೆರಿಟೋರಿಯಲ್ ಆರ್ಮಿಯ 162ನೇ ಬೆಟಾಲಿಯನ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು.